2019 ಕಹಳೆ ಕವಿತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ |ತಲೆಮಾರು| ಪ್ರಕಾಶ್ ಪೊನ್ನಾಚಿ


ನನಗೆ ವಯಸ್ಸಾಗಿದೆ ಎನಿಸಿದಾಗಲೆಲ್ಲ
ನಕ್ಷತ್ರಗಳು ಉದುರುವುದು ತೀರ ಭಯ
ಹುಟ್ಟಿಸದೆ ಇರದು

ನಾನಿನ್ನು ಹುಲುಮಾನವ
ಹುಟ್ಟು ಸಾವುಗಳ ಸರ್ಪಸಂಬಂಧವನು
ಅಷ್ಟಾಗಿ ಹಚ್ಚಿಕೊಳ್ಳದವನು ನೂರರ ಗೋಡೆ
ಬಿರುಕು ಬಿಟ್ಟಾಗಲು ಅದೇ ಭಯ
ಎಚ್ಚರಿಸದೇ ಬಿಡದು

ಈಗೀಗ ಮೊಮ್ಮಕ್ಕಳು ತಾತ ಎನ್ನುವಾಗ
ನನಗೆ ಹಳತು ಭಾವಕಾಡುತ್ತದೆ
ಗಡ್ಡದ ಕೂದಲು ಬಿಳಿ ಮೆತ್ತಿಕೊಂಡು
ನನ್ನ ವಯಸ್ಸಿಗೆ ಪುರಾವೆ ಒದಗಿಸುವಾಗ
ಎದುರಿನ ಅಸ್ಪಷ್ಟ ಚಿತ್ರಣಗಳು ಚಸ್ಮದ ವಕ್ರ
ಮೇಲ್ಮೈಗಷ್ಟೆ ಬಿಂಬಿಸಿ ಘಾಸಿಗೊಳಿಸುತ್ತವೆ

ಮೇಸ್ಟ್ರು ಸೇರಿಸಿದ ಹುಟ್ಟಿನ ದಿನ
ನಿಖರತೆಗೆ ನಿಲ್ಲುತ್ತಿಲ್ಲ
ಟಂಕಿಸಿ ಫೈಬರ್ ಶೀಟಿನಲಿ ಜೋಪಿಟ್ಟುಕೊಂಡ
ಇಯತ್ತೆಗಳ ಅಂಕಪಟ್ಟಿ
ತಿಂಗಳಷ್ಟು ಮುಂದಕ್ಕೆ ತೋರಿಸಿ
ಈ ವಯಸ್ಸಿಗೆ ಸೆಡ್ಡು ಹೊಡೆಯುವಾಗ
ಅಧಿಕ ಮಾಸದ ಫೆಬ್ರವರಿ ಕ್ಯಾಲೆಂಡರಿನಲ್ಲಿ
ನೇತಾಡುತ್ತದೆ

ಎಡವದಿರಲೆಂದು ಮಗ ತಂದು ಮೂಲೆಯಲಿಟ್ಟ
ವಾಕಿಂಗ್ ಸ್ಟಿಕ್ ನನ್ನನ್ನೇ ಗುರಾಯಿಸುವಾಗ
ಅಂಚೆಯವನು ತಿಂಗಳಿನ ಪಿಂಚಣಿ ನೀಡಿ
ಸಹಿ ಕೇಳುವಾಗ
ಎದುರು ಬಂದ ಕಂಡಕ್ಟರ್ ಸೀನಿಯರ್ ಸಿಟಿಜನ್ನ
ಎನ್ನುವಾಗ
ಬ್ಯಾಂಕಿನ ಮುಂದೆ ಅರವತ್ತು ದಾಟಿದವರಿಗೆ ಸಾಲವಿಲ್ಲ
ಎನ್ನುವ ಬೋರ್ಡು ಕಣ್ಣಿಗೆ ಬಿದ್ದಾಗ
ಹಾಳು ವಯಸ್ಸಿನ ಮೇಲೆ ಇನ್ನಿಲ್ಲದ ಕೋಪ
ತಾನಾಗೆ ಹುಟ್ಟಿಕೊಳ್ಳುತ್ತೆ

ಅರವತ್ತಕೆ ಅರಳೋ ಮರುಳೋ
ಮರೆತುಬಿಡುವುದು ಈಗೀಗ ವಯಸ್ಸಿನ
ಬೀಗರಾಗಿ ಹೋಗಿದೆ
ಬಾತ್ ರೂಮಿಗೆ ಚಿಲಕ ಹಾಕಲೂ ನೆನಪಾಗದಾಗ
ತಾತಾ ಪ್ಯಾಂಟಿಗೆ ಜಿಪ್ ಏರಿಸಿ ಎಂದು ಪುಟ್ಟಿ
ಅವಲತ್ತುಕೊಂಡಾಗ
ಹಾಳು ವಯಸ್ಸಿನ ಮೇಲೆ
ಕನಿಕರ ಉಕ್ಕುಕ್ಕಿ ಕಡೆಯುತ್ತದೆ

ನನಗೆ ಸಾವಿಗೆ ಅಂಜಿಕೊಳ್ಳುವ
ಯಾವ ಉಮೇದುವಾರಿಕೆಯೂ ಇಲ್ಲ
ಆದರೂ
ನನ್ನದೇ ವಯೋಮಾನದ ನಕ್ಷತ್ರಗಳು ಇನ್ನೂ
ಪ್ರತಿಫಲನವನ್ನೇ ಬೀರುವಾಗ
ನನ್ನ ಹಿರಿತನದ ಕುರುಹುಗಳು ಸಣ್ಣಗೆ
ಹೇಸಿಗೆಯನೆ ಹುಟ್ಟಿಸುತ್ತವೆ

ಗೋಡೆಗೆ ನೇತುಬಿಗಿದ ಅಪ್ಪುವಿನ ಪಾಟೀಚೀಲ
ಬಾಳಿಕೆ ಬರಲೆಂದು ಗಟ್ಟಿಯಾಗೆ ತಂದ ಮಗನ
ಶೇವಿಂಖ್ ಡಬ್ಬ
ಅವ್ವ ಬಳಸಿಯೂ ಬಿರುಕಾಗದ ತಾಮ್ರದ ಚೊಂಬು
ನಿರ್ಜೀವಗಳಂತೆ ಹಾಗೆಯೇ ಬಿದ್ದಿರುವಾಗ
ಈ ವಯಸ್ಸಿಗೂ ಜೀವವಿಲ್ಲದಿದ್ದರೆ ಎನಿಸುತ್ತದೆ

ಈಗೀಗ
ಉಲ್ಕೆಯೊಂದು ತಪ್ಪಿಸಿಕೊಂಡು ಬಾನು ಬಿಡುವ
ಭಯಾನಕ ನೋಟ
ವಯಸ್ಸಿನೊಂದಿಗೆ ವೈರಾಗ್ಯಕೆ ನಿಂತ ನನಗೆ
ಸೋತುಹೋದವನೆದುರು ಬೆಳಕು ಆರಿದಂತೆನಿಸುತ್ತಿದೆ
–  #ಪ್ರಕಾಶ್ ಪೊನ್ನಾಚಿLeave a Comment

Your email address will not be published. Required fields are marked *

Scroll to Top