2019 ಕಹಳೆ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ |ಮುಡ್ಪು| ವಿಘ್ನೇಶ ಹಂಪಾಪುರ


ಸುಬ್ರಮ್ಮಣ್ಯಶಾಸ್ತ್ರಿಗಳ ಚರಿತ್ರೆ ಯಾರ್ಗೂ ಗೊತ್ತಿಲ. ನಂಗೂ ಗೊತ್ತಿಲ್ಲ. ಅಂದ್ರೆ, ನಮ್ಮೂರಿಗ್ ಬರೋ ಮುಂಚೆ ಅವ್ರೆಲ್ಲಿದ್ರು, ಏನ್ ಮಾಡ್ತಿದ್ರು, ಅವ್ರಪ್ಪ ಯಾರು, ಅವ್ರ್ತಾತ ಯಾರು, ನಮ್ಮೂರಿಗ್ ನಿಜ್ವಾಗ್ಲು ಯಾಕ್ ಬಂದ್ರು — ಈ ರೀತಿ ಪ್ರಶ್ನೆಗಳ್ನ ಕೇಳ್ಬೇಕು ಅಂತ ನಮ್ಮೂರಲ್ ಯಾರ್ಗೂ ಅಂಸ್ಲೇ ಇಲ್ಲ ಅಂಸತ್ತೆ. ಅವ್ರು ಬಂದ್ರು, ನಾವ್ ನಮ್ಸ್ಕಾರ ಹೋಡಿದ್ವಿ.

ಕತೆ ಕೇಳಿ. ಯಾವತ್ತೋ ಒಂದಿನ – ನೋಡಿ, ನಾ ಚಿಕ್ಕೋನಿದ್ದೆ; ನಾ ಹೇಳೋದೆಲ್ಲ ಅವ್ರಿವ್ರು ಹೇಳಿದ್ದು, ನಾನೇ ಕದ್ದು ಕೇಳಿದ್ದು, ಇಂತಾದ್ದು; ಸತ್ಯ-ಸುಳ್ಳು ಗೊತ್ತಿಲ್ಲ, ಆದ್ರೆ ಗೊತ್ತಿರೋದೆಲ್ಲ ಹೇಳ್ತಿನಿ – ಯಾವತ್ತೋ ಒಂದಿನ ಅಲ್ಮೇಲಮ್ಮನ್ ಕೊನೇ ಹಸು ಸಂಜೆ ಆರ್ಗಂಟೆ ಆದ್ಮೇಲು ವಾಪಸ್ ಬರ್ಲಿಲ್ಲ ಅಂತ ಅಲ್ಮೇಲಮ್ಮಾನೇ ‘ಕಲ್ಲೀ, ಕಲ್ಲೀ…’ ಅಂತ ಮೇವಿನ್ಕಡೆ ಹುಡ್ಕೊಂಡ್ ಹೋದಾಗ, ಮೂರ್ ವರ್ಷದಿಂದ ಕಿಟ್ಕಿ ಬಾಗಿಲು ಮುಚ್ಚಿದ್ದ ಸಂಗಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಸಿ ಬೆಳಕಂತೆ. ಆ ದೇವಸ್ಥಾನದ್ ಮುಂದೇನೇ ಕಲ್ಪವಲ್ಲಿ – ಅದೇ, ಅಲ್ಮೇಲಮ್ಮನ್ ಕೊನೇ ಹಸು – ಬಾಳೇಯೆಲೆ ಮೇಲ್ ಹರಡಿದ್ದ ಯಾವ್ದ್ಯಾವ್ದೋ ಹಣ್ಗಳನ್ನ ಮೆಲಕ್ತಾ ನಿಂತಿತ್ತು. ಅಮ್ಲ್ಮೇಲಮ್ಮ ಇದ್ಬದ್ದಿದ್ ಧೈರ್ಯಾನೆಲ್ಲ ಕುಡಾಕ್ಕೊಂಡು ದೇವಸ್ಥಾನದ ಮೆಟ್ಲು ಹತ್ದಾಗ ಒಳಗೆ ಸುಬ್ರಮ್ಮಣ್ಯಶಾಸ್ತ್ರಿಗಳು ಆಗ್ತಾನೆ ತೊಳೆದು ಬಳೆದು ಫಳ್-ಫಳಾ ಹೊಳಿತಿದ್ದ ಲಿಂಗಕ್ಕೆ ವೀಭೂತಿ ಹಚ್ತಾಯಿದ್ರಂತೆ. ಸಣಕಲ್ಕಡ್ಡಿ ಮನುಷ್ಯ. ಅವ್ರ ಮೂರೂ ಬೆರಳು ಸೇರಿ ಹಚ್ಚಿದ ಪಟ್ಟಿ ನಮಗೆ ಒಂದು ಬೆರಳ ಹಾಗೆ ಕಾಣ್ಸ್ತಾ ಇತ್ತು. ಇರ್ಲಿ. ಆ ದಿನ ಅವ್ರು ವೀಭೂತಿ ಹಚ್ತಿದ್ರು. ಶಾಸ್ತ್ರಿಗಳ ಹೆಂಡ್ತಿ ಶಾರ್ದಮ್ಮ ಗರ್ಭಗುಡಿ ಹೊರ್ಗಡೆ ಕೂತ್ಕೊಂಡು ಹೂ ಕಟ್ತಿದ್ರು.

‘ಯಾರಪ್ಪ ನೀವು?’ ಅಂತ ಅಲ್ಮೇಲಮ್ಮ ಕೇಳಿದ್ದಕ್ಕೆ, ಊರಿಗ್ ಹೊಸ್ದಾಗ್ ಬಂದೌರು, ಅವತ್ತಾನೆ ಕಾಲಿಟ್ಟಿದ್ದು, ದೇವರ ಪೂಜೆ ಸೇವೆನೇ ನಮ್ ಕೆಲ್ಸ ಅಂತ ಇಬ್ರೂ ಕೈಬಿಚ್ಕೊಂಡು ಕೂತಿದ್ದಾಗ ಸಾರ್ಕೋಟೆಯಿಂದ ಒಂದ್ ಫರ್ಲಾಂಗ್ ದೂರ್ದಲ್ಲಿರೋ ಸಂಗಾಪುರದ್ ಹಳ್ಳೀಲಿ ಮೂರ್ ವರ್ಷದಿಂದ ಸಂಗಮೇಶ್ವರ ಶ್ರೀಕ್ಷೇತ್ರದ ದೇವಸ್ಥಾನ ಖಾಲಿ ಕೂತಿದೆ, ನನ್ ಪೂಜೆ ಆಗ್ತಿಲ್ಲ, ಅಭಿಶೇಕ ಆಗ್ತಿಲ್ಲ, ಬಂದ್ ನೆರ್ವೇರ್ಸು ಅಂತ ಕನ್ಸ್ನಲ್ಲಿ ಧ್ವನಿ ಕೇಳಿ ಇಲ್ಲಿಗ್ ಬಂದೌರು ಅಂತ ಹೇಳಿದ್ರು. ಇದನ್ನೆಲ್ಲ ಅಲ್ಮೇಲಮ್ಮನೇ ಊರ್ಗೆಲ್ಲ ಹರ್ಡಿದ್ದು. ಜೊತೆಗೆ ಅವ್ರ ಬಗ್ಗೆ ಎರಡೊಳ್ಳೇ ಮಾತನ್ನೂ ಸೇರ್ಸಿದ್ಳು: ‘ನಮ್ ಗುಡಿನಾ ಶ್ರೀಶ್ರೇತ ಅಂತಾನಪ್ಪೋ. ಅಂತೂ ನಮ್ ಗುಡಿಗೋಬ್ ಪುರೋಇತ ಬಂದ್ನಲ್ಲ. ಪಾಳ್ ಬಿದ್ದೋದಂಗಾಗಿತ್ತು.’  

ಇದೆಲ್ಲಾ ಕೇಳಿ ಇಡೀ ಊರೇ ನಾಲಕ್ ದಿನದಲ್ಲಿ ದೇವಸ್ಥಾನದ್ ಮುಂದೆ ಸೇರಿತ್ತು. ಸುಬ್ರಮ್ಮಣ್ಯಶಾಸ್ತ್ರಿಗಳು ಮೂರ್ನದಿ ಕೂಡೋ ತ್ರಿವೇಣೀಸಂಗಮ್ದಿಂದ ಎರ್ಡು ಕೊಡ ನೇರ್ ಹೊತ್ಕೊಂಡ್ ಬಂದು ಸಂಗಮೇಶ್ವರ ಲಿಂಗಾನ್ ತೋಳ್ದು, ಹೊಸ ಪಂಚೆ ಸುತ್ತಿ, ವೀಭೂತಿ ಪಟ್ಟೆ ಹಚ್ಚಿ, ಹೆಂಡ್ತಿ ಕಟ್ಟಿದ್ ಹೂಹಾರಗಳ್ನೆಲ್ಲ ಲಿಂಗದ್ ತಲೆಮೇಲ್ ಹಾಕಿದ್ಮೇಲೆ, ಹೆಂಡ್ತಿ ಕೈಗ್ ಜಾಗ್ಟೆ ಕೊಟ್ಟು ಮಂಗ್ಳಾರ್ತಿ ಎತ್ತಿದಾಗ ಬಂದೌರೆಲ್ಲ ‘ಶಿವ್ನೇ ಕಾಪಾಡಪ್ಪ, ಹರ ಹರ ಮಾದೇವಾ!’ ಅಂತ ಕೂಗಾಕಿ ನೀಲಮ್ಮನ್ ಚಂದದ್ ಹುಡ್ಗಿ ಚೆಲ್ವಿ ಕೈಲಿ ಪದ ಹಾಡ್ಸಿದ್ದೂ ಆಯ್ತು. ಸುಬ್ರಮ್ಮಣ್ಯಶಾಸ್ತ್ರಿಗಳು ಗಮಾ ಇಟ್ಕೊಂಡು ಮೂರ್ ಸತಿ ಪೂಜೆ ಅಲಂಕಾರ ಮಾಡ್ತಾ, ‘ಶಿವಂಗೆ ಅಭಿಶೇಕ ಅಂದ್ರೆ ಇಷ್ಟ. ಬಸ್ವಣ್ಣ ಹೇಳಲ್ವೇ? ನಾದಪ್ರಿಯ ಅಲ್ಲ, ವೇದಪ್ರಿಯ ಅಲ್ಲ, ಮತ್ನಂಗ್ ವೇದಾನೂ ಬರಲ್ಲ, ಭಕ್ತಿಪ್ರಿಯನೂ ನಮ್ಮ ಕೂಡಲಸಂಗಮದೇವ ಅಂತ. ತ್ರಿವೇಣಿಸಂಗಮದೇವನೂ ಅಷ್ಟೇಯ. ಮೂರ್ನದಿಯ ಪವಿತ್ರ ನೀರನ್ನ ಸದಾ ತಲೆ ಮೇಲೆ ತೊಟಕ್ಸ್ತಾ ಇದ್ರೆ ಸಾಕು, ಅಭಯಹಸ್ತ ನೀಡಿ ಆಶೀರ್ವಾದ ಮಾಡ್ತನೆ,’ ಹೀಗೆಲ್ಲ ಹೇಳ್ಕಂಡು ದೇವಸ್ಥಾನಕ್ ಬಂದ ಬಾಳೇಹಣ್ಣು, ತೆಂಗಿನ್ಕಾಯ್, ಅಂಗಳ್ದಲ್ಲಿ ಬೆಳಿತಿದ್ದ ಗೆಣ್ಸು, ಮೆಣ್ಸು ಬೇಯ್ಸ್ಕೊಂಡು, ಹೆಂಡ್ತಿ ಜೊತೆ ಜಗ್ಲಿ ಮೇಲ್ ಮಲ್ಕೊತಿದ್ರು. ಒಂದಿಷ್ಟ್ದಿನ ಅಷ್ಟೇ. ಪಂಚಾಯ್ತಿ ಅಧ್ಯಕ್ಷರು ಮೊದಲ್ನೇ ಸತಿ ಪೂಜೆಗ್ ಬಂದಾಗ ನೂರ್ ರುಪಾಯ್ ಅವರ ಕೈಗಿಟ್ಟು, ‘ಏ, ದೇವಸ್ಥಾನದ್ ಅರ್ಚಕರು ಯೂರು, ತಿಂಗ್ಳಿಗಾಗೋಷ್ಟು ದಿನ್ಸಿನಾ ಊರ್ಕಡೆಯಿಂದ ಕೊಡ್ಬೇಕಂತೆ ಅಂತ ಶರಣಪ್ಪನ್ ಅಂಗ್ಡಿಗ್ ಹೇಳ್ಬಿಡು’ ಅಂತ ಅಶ್ಟೆಂಟಿಗ್ ಆರ್ಡರ್ ಮಾಡ್ದ್ಮೇಲೆ ಉಟಕ್ಕೇನೂ ತೊಂದ್ರೆ ಇರ್ಲಿಲ್ಲ. ಊರ್ನಲ್ಲಿ ಯೂರನ್ನ ಊಟಕ್ಕರ್ಯಕ್ಕೆ ಎಲ್ರಿಗೂ ಭಯ, ಬ್ರಾಮಣ್ರು ಅವ್ರಿವ್ರ್ ಮನೆ ಊಟಕ್ ಬರ್ತರೋ ಇಲ್ವೋ ಯಾರಿಗೊತ್ತಿತ್ತು? ದೇವಸ್ಥಾನದ ಮುಂಚಿನ ಪುರೋಹಿತ್ರ ನರಹರಿಭಟ್ರ ವಿಧ್ವೆ ಸೊರ್ಣಗೌರಮ್ಮ ಮಾತ್ರ ಅನ್ನ ಬೇಯ್ಸಿ ಸಾರ್ ಕುದ್ಸಿ, ಶಾರ್ದಮ್ಮಂಗೆ ಮನೆಯವ್ರನ್ನ ಕರ್ಕೊಂಬನ್ನಿ ಅಂತ ಕರ್ದಿದ್ರು. ರಾತ್ರಿ ಊಟ ಬಡ್ಸಿ, ತಾನೂ ಊಟ ಮಾಡಿ ಮಲ್ಕೊಂಡ್ ಗೌರಮ್ಮ ಬೆಳಗ್ಗೆ ಏಳ್ಲೇಇಲ್ಲ. ಅವ್ಳ ಗಂಡನ ಜಾಗ ತಗೊಂಡ ಶಾಸ್ತ್ರಿಗಳ್ಗೆ, ಅವಳ ಜಾಗ ತಗೊಂಡ ಶಾರ್ದಮ್ಮ ಮುತ್ತೈದೆಗೆ ಒಂದ್ ತುತ್ತು ಊಟ ಹಾಕಕ್ಕೇ ಇಷ್ಟ್ ವರ್ಷ ಬದ್ಕಿದ್ಲು ಅಂತೇಳಿ ಊರ್ನವ್ರೇ ಸುಟ್ಟಾಕಿದ್ದು. ಸಂಗಮದಲ್ಲೇ ತೇಲ್ಬಿಟ್ಟಿದ್ದು.

ನರಹರಿಭಟ್ರಿಗೆ ಮಕ್ಳಿಲ್ದಿದ್ದ್ರಿಂದ್ರ ಆಸ್ತಿ ಗಲಾಟೆ ಇರ್ಲಿಲ್ಲ. ಮತ್ತೆ ನರಹರಿಭಟ್ರಿಗೆ ಊರ್ನೋರೇ ಸೇರಿ ಮನೆ ಕಟ್ಸಿಕೊಟ್ಟಿದ್ದು. ಸಂಗಮೇಶ್ವರನ್ ಉತ್ಸವಮೂರ್ತಿ ಇಟ್ಕೊಂಡು ದೇವಸ್ಥಾನದ್ ಪಕ್ದಲ್ಲಿದ್ದ ಅವ್ರಪ್ಪನ್ ಕಾಲದ್ ಗುಡ್ಸಲ್ನಲ್ಲಿ  ಇದ್ದವ್ರನ್ನ ಕರ್ಕೊಂಡ್ ಬಂದು ರಂಗೋಲಿ ಹಾಕಿದ್ ಮನೆಯೊಳ್ಗೆ ಸೇರ್ಸಿದ್ರು ಊರಿನ್ ಜನ. ಪಕ್ಕದೂರಿನ್ ಪುರೋಹಿತ್ರನ್ನ ಕರ್ಸಿದ್ರು ವಾಸ್ತುಪೂಜೆಗೆ. ಹಾಗ್ನೋಡಿದ್ರೆ ಊರ್ನೋರ್ದೇ ಅಲ್ವಾ ಮನೆ? ಹೊಸ ಪುರೋಹಿತ್ರು ಬಂದಿದ್ರು, ಅವ್ರಿಗೇ ಅಂತ ಪಂಚಾಯ್ತಿಲಿ ಫಾಸಾಯ್ತು. ಜಗ್ಲಿ ಮೇಲ್ ಮಲಗ್ತಿದ್ದ ಸುಬ್ರಮ್ಮಣ್ಯಶಾಸ್ತ್ರಿಗಳ್ಗೆ ವ್ಯವಸ್ಥೆ ಏನ್ ಮಾಡದು ಅಂತ್ ಯೋಚಿಸ್ತಿದ್ದ ಅಧ್ಯಕ್ಷರಿಗೊಂದ್ ದಾರಿ ಸಿಕ್ತು. ಆ ಸಂಗಮೇಶ್ವರಸ್ವಾಮಿ ಪೂಜೆ ಮಾಡ್ತಿದ್ದವ್ರ ಮನೆ, ಅವನ ಉತ್ಸವಮೂರ್ತಿ ಇದ್ದ ಮನೆ, ಅದೇ ಮನೇನ ಈಗಿನ ಪುರೋಹಿತ್ರಿಗೆ ಕೊಡೋದು. ‘ನಿಜ್ವಾದ್ ವಾರ್ಸುದಾರ,’ ಅಂತ ಅಲ್ಮೇಲಮ್ಮ ಹೇಳಿದ್ದೂ ನ್ಯಾಪ್ಕ ಇದೆ.

ಹೀಗೇ ಊರ್ನೋರೆಲ್ರೂ ಹತ್ರ ಆದ್ವಿ. ವರ್ಷಗಳಿಂದ ಇಲ್ಲೇ ಇದ್ದೌರಂಗೆ ಅವ್ರೂ ಇದ್ರು. ಆ ಶಾರ್ದಮ್ಮನೋ – ಅಬ್ಬಬ್ಬಬ್ಬಬ್ಬಾ – ಹೊಲದಲ್ ಕೈಸಹಾಯ ಮಾಡಕ್ ಬರ್ತಿದ್ರು. ‘ನಿಮಿಗಿದೆಲ್ಲ ಹೇಗ್ ಬರತ್ತೆ,’ ಅಂದ್ರೆ, ‘ಹಾಗೆ ಕಲಿತ್ಕೊಳ್ಳೋದು ಎಲ್ಲವನ್ನ. ದೇವರು ಮಾಡೂ ಅಂದ್ರೆ ಮಾಡೋದು’ ಅಂತಿದ್ರು. ರೀತಿ ನೀತಿ ನೋಡ್ದೆ ನಮ್ಮನೆಲೊಂದ್ಸತಿ ನೀರ್ ಕೇಳ್ಬಿಟ್ರು. ಅಮ್ಮ ಕಾಫಿ ಕೊಡ್ಲಾ ಅಂದ್ರೆ ಅದ್ನೂ ತೊಗೊಂಡ್ರು. ಆಗ್ಲೇ, ಶಾರ್ದಮ್ಮ ನಮ್ಮೂರೋರಲ್ಲ ಅಂತ್ ನನಗಂಸಿದ್ದು.

ಮೂರ್ ತಿಂಗಳಿರ್ಬೇಕು ಶಾಸ್ತ್ರಿಗಳ್ ಬಂದ್ಮೇಲೆ, ಊರೋರ್ಗೆಲ್ಲ ನಮ್ ಜಾತ್ರೆನ ಮತ್ ಶುರು ಮಾಡ್ಬೇಕಂತ ಆಸೆ. ಪಕ್ಕದ್ ಊರ್ಗಳಲ್ಲಿ ಆದ ಜಾತ್ರೆಗೆ ಇಲ್ಲೀ ಹಸು, ಆಡು ಕಟ್ಕೊಂಡು, ಲೂನಾ, ಸೈಕಲ್ನಲ್ಲಿ ಹೋಗಿ, ಹೊಸ ಸೀರೇ ಜಾಕಿಟ್ ಹಾಕ್ಕೊಂಡು, ಮಕ್ಕ್ಳನ್ನೆತ್ಕೊಂಡು ಅಲ್ಲಿ ಕುಣಿಯೋದು. ನಮ್ ಊರಿನ್ ಜಾತ್ರೆ ನೆನಪ್ಬರಲ್ವಾ? ಅದೂ, ಅದ್ಯಾವ್ದೋ ದೇಶ – ನಂಗ್ಬಾಯಲ್ ಹೊರ್ಡಲ್ಲ – ಅಲ್ಲಿರೋ ಶ್ರೀಮಂತ್ರೊಬ್ರು ಸಂಗಮೇಶ್ವರ ಅವ್ರ ಮನೆದೇವ್ರು ಅಂತ್ ಗೊತ್ತಾಗಿ, ಇಲ್ಲಿಗ್ ಇನ್ನೋವಾದಲ್ ಬಂದು, ಎಲ್ರನ್ನು ಮಾತಾಡ್ಸಿ ಊಟ ಮಾಡಿ ಬಡ್ಸಿ, ದೇವಸ್ಥಾನದ ಜಾತ್ರೆಗೆ ಅಂತಿದ್ದ ಮರದ್ ರಥಕ್ಕೆ ಬೆಳ್ಳಿ ಪ್ಲೇಟ್ ಮಾಡ್ಸಕ್ಕೆ ಹನ್ನೆರಡ್ಸಾವ್ರ ಕೊಟ್ಟು ಹೋದಾದ್ಮೇಲೆ, ಅದನ್ ತೊಗೊಂಡು ನರಹರಿಭಟ್ರೂ ಅಧ್ಯಕ್ಷರೂ ಸೇರಿ ಮಲ್ನಾಡಿಂದ ಸಾರ್ಪೇಟೇಗ್ ಯಾರ್ನೋ ಕರ್ಸಿ, ನಮ್ ರಥನಾ ಬೆಳ್ಳಿ ಮಾಡ್ಸಿ ವಾಪಸ್ ತಂದು, ಅದಕ್ಕಂತನೇ ಪಂಚಾಯ್ತಿ ಫಂಡ್ಸಿಂದ ಶೆಡ್ ಕಟ್ಸಿ ಜೋಪಾನ ಮಾಡಿದ್ಮೇಲೆ, ಜಾತ್ರೆ ಧಾಮ್ ಧೂಮಾಗ್ ನಡಿತಿತ್ತು. ಸುತ್ತ ಹದ್ನಾರ್ ಹಳ್ಳಿ ಇಂದ ಜನ. ಬಟ್ಟೆಬರೆ, ಬಳೆ, ಆಟಸ್ಸಾಮಾನು, ಸ್ಟೀಲ್ಪಾತ್ರೆ, ಕರ್ದಿದ್ಪರ್ದಿದ್ದು, ಮಸಾಲೆಗಳು ಅಂತದ್ದು ಮಾರಕ್ಕೆ ಕೊಂಡ್ಕೊಳಕ್ಕೇ ಜಾಸ್ತಿ ಜನ. ಮತ್ ದೇವಸ್ಥಾನದಲ್ ಐದ್ಸತಿ ಪೂಜೆ. ಸಂಗಮದ್ದಂಡೇಲಿ ಪ್ರತಿ ದಿನ ನೈವೇದ್ಯ ಮಂಗ್ಳಾರ್ತಿ. ನಲ್ಲಿಕಾಯ್ ಕಾಲ ಆದ್ರೆ ಅದ್ರ ಮೇಲ್ ದೀಪ ಬೆಳ್ಗಿ ಹರಿದ್ ಬಿಡ್ತಿದ್ವಿ. ಇದೆಲ್ಲನೂ ಈಗ ಮತ್ ಪುರೋಹಿತ್ರು ಸಿಕ್ಕಿದ್ರಿಂದ ಶುರು ಮಾಡ್ಬೇಕಂತ ಊರಿನ್ ಜನಕ್ಕೆ ಮನ್ಸು. ಶಾಸ್ತ್ರಿಗಳು ‘ಇದ್ ನಂಗ್ ಹೊಸ್ದು. ಆದ್ರೆ ಮಾಡನಂತೆ’ ಅಂತೊಪ್ಕೊಂಡ್ರು. ನಮ್ ಕೆಲ್ಸ ಶುರು. ಎಲ್ಲ ಊರ್ಗು ಹೋಗಿ ಹೇಳದು. ‘ಜಾತ್ರೆನ್ ಮತ್ ಮಾಡ್ತಿದಿವಿ ಬನ್ನಿ! ಓ, ಅದೂ, ಹೊಸ ಪುರೋಹಿತ್ರು ಸಿಕ್ಕಿದರೆ. ಸುಬ್ರಮ್ಮಣ್ಯಶಾಸ್ತ್ರಿಗಳು. ಒಳ್ಳೆ ಪೂಜೆ, ಒಳ್ಳೆ ಮನ್ಷ್ಯ. ಗೌರಮ್ಮನಾ? ಹೋಗಾಯ್ತು, ಶಿವನ್ಪಾದ.’ ಎಲ್ಲ.

ಜಾತ್ರೆ ದಿನ ದೊಡ್ಡೂರಿಂದ ಶ್ರೀನ್ವಾಸಪ್ಪ ಬಂದಿದ್ರು. ಅವ್ರ ಮನೆದೇವ್ರು. ಪ್ರತಿಸತಿ ಊರಿಗ್ ಎರಡ್ಸಾವ್ರ ಕೊಡ್ತಾರಂತೆ. ನೋಡಿದ್ರೆ ಗೊತ್ತಗತ್ತೆ. ಕತ್ತಲ್ಲಿ ಒಂದ್ದಪ್ಪ ಚಿನ್ನದ್ಚೇನು, ಕೈಯಲ್ ಬೆಳ್ಳೀಕಡ್ಗ. ‘ನಮ್ ತಾತಂಗೆ ಸಿಕ್ಕ ಆಸ್ತಿ-ಪಾಸ್ತಿ ಎಲ್ಲ ಈ ಸಂಗಮೇಶ್ವರನ್ ಕೃಪೆ,’ ಅಂತೊಂದ್ ಮಾತಾಡಿ, ಹಲ್ಕಿರ್ದು, ಉರ್ ಸೇರ್ಕೊತರೆ. ಪರ್ವಾಗಿಲ್ಲ, ದೊಡ್ ಮನ್ಷ್ಯ. ಇನ್ನೊಬ್ನಿದನೆ. ವರ್ಷಕ್ಕೊಂದ್ಸತಿ ಮಕ್ಳುಮರಿನೆಲ್ಲ ಕಟ್ಕೊಂಡ್ ಬಂದು ನದಿದಂಡೆ ಮೇಲೆ ಹೊತ್ಕೊಂಡ್ ಬಂದ್ ತಿಂಡಿ ಚಪ್ಪರ್ಸ್ತಾನೆ. ಬ್ರಾಮಣ, ಸೇಶಪ್ಪ. ಈ ಸತಿನೂ, ಮಕ್ಳುಮರಿನ ಕಟ್ಕೊಂಡು ಬಂದಿದ್ದ.

ಜಾತ್ರೆ ಕೊನೇ ದಿನ, ಇನ್ನೇನ್ ಪಂಚಾಮೃತ ಅಭಿಶೇಕ ಮುಗ್ದು ಮಾಮಂಗ್ಳಾರ್ತಿ ಆಗ್ಬೇಕು, ‘ರುದ್ರ ಹೇಳಿ, ಶಾಸ್ತ್ರಿಗಳೇ,’ ಅಂತ ಮಾತೆತ್ದ. ಶಾಶ್ತ್ರಿಗಳ್ ಮುಖ ಮುದ್ರೋಯ್ತು – ಅವತ್ತೇ ಅವರ ಕತೆ ಒಂತರ ಮುಗ್ದೋಗಿತ್ತು ಅಂತಿನಿ. ಶಾರ್ದಮ್ಮ ಮಾತ್ ತೂರ್ಸಿದ್ರು. ‘ಈಗ್ಯಾಕ್ ಸೇಶಪ್ನೋರೇ? ಪೂಜೆ ಕೊನೆ ಆಗ್ತಾ ಬಂತು. ಎಲ್ರೂ ಮಂಗ್ಳಾರ್ತಿಗೆ ಕಾಯ್ತಾ ಇದರೆ. ರುದ್ರ ಸಮಯ ತೊಗೊಳಲ್ವಾ? ಈಗ್ಯಾಕಂತ?’ ಅಂದ್ರು. ಸೇಶಪ್ಪ ಜೋರಾಗ್ ನಕ್ಬಿಟ್ಟ. ‘ಅಲ್ಲಮ್ಮ,’ ಅಂತ್ ಮೆತ್ತಿಗ್ ಶುರು ಮಾಡಿ, ‘ನಿಮ್ಮನೆಯೋರ್ಗೆ ರುದ್ರ ಬರಲ್ಲ ಅಂದ್ರೆ ಬರಲ್ಲ ಅಂದ್ಬಿಡಿ. ಈ ರೀತಿ ಎಲ್ಲ ಮಾತ್ ಬದಲಿಸ್ಬೇಡಿ. ನಾನೂ ಮಂತ್ರ ಕೇಳ್ತನೇ ಇದಿನಿ. ಸ-ಶ-ಷ ಸರೀಗ್ ಹೊರಳಲ್ಲ. ಒತ್ತಕ್ಷರಾನೆಲ್ಲ ನುಂಗ್ತಾರೆ. ಭಕ್ತಿ ಇದೆ ಅಂತೀರಿ. ಏನ್ನನ್ಬೇಕೋ? ಬಿಡಿ. ನನ್ ಮಗನೇ ನಾಲ್ಕು ಶ್ಲೋಕ ಹೇಳ್ ಮುಗ್ಸ್ತಾನೆ. ಅದ್ವೈತಾ, ಬಾ ಇಲ್ಲಿ. ಶುರು ಮಾಡು, ನಾ ಸೇರ್ಕೊತಿನಿ.’

ಶಾರ್ದಮ್ಮ ಸುಮ್ನೆ ಹಿಂದೆ ಸರಿದ್ಬಿಟ್ರು. ಶಾಸ್ತ್ರಿಗಳು ಲಿಂಗದ್ ಮುಂದೆ ಕೂತು ಅವಾಗಿವಾಗ ಒಂದೊಂದ್ ಹೂ ಹಾಕ್ತಿದ್ರು. ಅವ್ರ ಮುಖ ಕಾಣ್ಸ್ದಿರೋ ಹಾಗ್ ಕೂತ್ಕೊಂಡಿದ್ರು. ಅವ್ರ್ ಮುಖ ಹೇಗಿತ್ತೋ, ಯಾರಿಗ್ಗೊತ್ತು? ಈ ಸೇಶಪ್ಪ, ಅವ್ನ ಮಗ ಅದ್ಯೈತ, ದೊಡ್ದಾಗ್ ಶ್ಲೋಕ ಹೇಳಿದ್ರು, ನಮ್ಗೇನು ಅರ್ಥ ಆಗ್ಲಿಲ್ಲ. ನರಹರಿಭಟ್ರು ಸತ್ತಾಗ, ಬನ್ನಿ ಸಹಾಯಕ್ಕೆ ಅಂದ್ರೆ ಬರ್ತಿನಿ ಅಂತ ಫೋನ್ ಎತ್ತಿಟ್ಟಿದ್ ಮನ್ಷ್ಯ, ಮನೆವರ್ಗೂ ಹೋಗಿ ಪುರೋಹಿತ್ರನ್ ಹುಡುಕ್ಕೊಡಿ ಅಂದಾಗ, ‘ಅಯ್ಯೋ, ಖಂಡಿತ, ಖಂಡಿತ, ನಮ್ದೇವ್ರಿಗಲ್ದೆ ಇನ್ಯಾವ್ ದೇವ್ರಿಗೆ?’ ಅಂತ ಎರಡೆರಡ್ ಬಾಳೆಹಣ್ಣು ಒಂದ್ಲೋಟ ಕಾಫಿ ಕೊಟ್ಟು ಕಳ್ಸಿ, ಈ ಕಡೆ ತಲೆನೂ ಹಾಕ್ದಿದ್ ಸೇಶಪ್ಪ, ಇವತ್ಬಂದು ದಿನಾ ದೇವ್ರಿಗ್ ಸ್ನಾನ ಮಾಡ್ಸ್ತಿದ್ದ ಶಾಸ್ತ್ರಿಗಳ್ಗಿಂತ ಅವ್ನು ಮತ್ ಆ ಚಿಕ್ಕ ಮಗ ದೊಡ್ಡೋರು ಅಂತ ತೋರ್ಸ್ಕೊತಿದ್ದ. ಸಣ್ ಮನ್ಸು. ಅವ್ರಿಬ್ರು ಮುಗ್ಸಿದ ಮೇಲೆ ಸೇಶಪ್ಪನ್ ಹೆಂಡ್ತಿ, ‘ಎಲ್ರೂ ನಿಮ್ ಮಂತ್ರ ಕೇಳ್ತಾ ಶಾಂತ್ವಾಗಿದ್ರು’ ಅಂದ್ಬಿಟ್ಳು. ನಂಗೊತ್ತಾಗಿದ್ರೆ ಹೇಳ್ತಿದ್ದೆ. ನಾವ್ ಮಂತಗಿಂತ್ರ ಕೇಳಲ್ಲ ಸುಮ್ಮನಿದಿದ್ದು, ನಮ್ಮ ಊರನ್ನ ಶಾಸ್ತ್ರಿಗಳ್ನ ಅವ್ಮಾನ ಮಾಡಿದ್ದಕ್ಕೆ ವಾಪಸ್ ಮಾತಾಡಕ್ಕಗಲ್ವಲ್ಲ ಅಂತ ಬಾಯ್ ಮುಚ್ಕೊಂಡಿದ್ವಿ ಅಂತ.

ಜಾತ್ರೆ ಮುಗಿದ ರಾತ್ರಿ, ಅಧ್ಯಕ್ಷರು ಮತ್ತೊಂದಿಷ್ಟ್ ಜನ ಶಾಸ್ತ್ರಿಗಳ್ ಮನೆಗ್ ಹೋಗಿ, ‘ಬೇಜಾರ್ ಮಾಡೊಬೇಡಿ ಶಾಸ್ತ್ರಿಗಳೇ, ಆ ಸೇಶಪ್ಪ ಸೊಲ್ಪ ಹಾಗೆ,’ ಅಂತ, ಇನ್ಕೆಲವ್ರು, ‘ನೀವ್ ಬಂದ್ಮೇಲೆ ಸಂಗಮೇಶ್ವರನ್ ಮುಂದೆ ದೀಪ ಉರಿತಿದೆ ಯೂರೇ. ಯಾವೊನೋ ಇಸ್ವಿಗೊಂಸತಿ ಬರೋನ್ ಮಾತ್ ಕಟ್ಕೊಬೇಡಿ, ನಾವ್ ನಿಮ್ನ ಬಿಡಲ್ಲ,’ ಅಂದ್ರು. ಅಲ್ಮೇಲಮ್ಮ ಸೇರ್ಸಿದ್ಳು: ‘ನಮ್ ಹಸೂಗೆ ಪರ್ಸಾದ ಆಕ್ತಿರ. ಉತ್ಸವ್ಮೂರ್ತಿ ಮನ್ಲಿದೆ. ಭಕ್ತಿ ಭಕ್ತಿ ಅಂತ ನಂಗೇ ಏಳ್ತೀರ. ಊಟ ಮಾಡಿ ಶಾಸ್ತ್ರಪ್ಪೋ.’ ಅವ್ರನ್ನ ಸಮಾಧನ ಮಾಡಕ್ ಕೊನೆಗೇ ಅಧ್ಯಕ್ಷ್ರು, ‘ಅಷ್ಟಕ್ಕೂ ನಿಮ್ಮನ್ಸಿನ್ ಸಮಾಧಾನಕ್ಕೆ ಉತ್ಸವ್ಮೂರ್ತಿ ಮುಂದೆ ಒಂದ್ವಾರ ತುಪ್ಪದ್ದೀಪ ಹಚ್ಬಿಡೀ. ನಮ್ ಖುಷಿಗೆ.’

ದೀಪಾನೂ ಆಯ್ತು. ಖುಷಿನೂ ಆಯ್ತು. ಆದ್ರೆ ಆ ವರ್ಷ ಮಳೆ ಬರ್ಲಿಲ್ಲ.

ಮಳೆ ಬರ್ಲಿಲ್ಲ ಅಂತ ನಮಿಗ್ ನೀರ್ ಸಿಗ್ಲಿಲ್ಲಾ ಅಂತಲ್ಲ. ನಮ್ಮೂರಲ್ಲಿ ಪಂಪಿತ್ತು. ನಲ್ಲಿಗಳಿದ್ವು. ಎಲ್ಲಿಂದ್ ನೀರ್ ಬಂದ್ವೋ ನಮ್ ನದಿಗಳಿಂದನಂತೂ ಅಲ್ಲ. ಆದ್ರೆ ನದಿ ಊರಿಗೆ ದೇವ್ರ ತರ. ಸಂಗಮೇಶ್ವರನ್ ಮಡಿಲಲ್ ಹರಿಯೋ ದೇವ್ರು. ಮನೆ ಶುದ್ದಿ ಮಾಡಕ್ಕೆ, ಹಸುಗಳನ್ ತೊಳ್ಯಕ್ಕೆ, ಲಿಂಗಕ್ ಸ್ನಾನ ಮಾಡ್ಸಕ್ಕೆ ಇದೇ ನೀರ್ ಉಪ್ಯೋಗ್ಸದು. ಮತ್ ಆ ಮೂರ್ ನದಿ ಕೂಡೋದಿಂದ್ಲೇ ದೇವಸ್ಥಾನ ಆಗಿರೋದ್ರಿಂದ, ನದಿ ಮಳೆ ಇಲ್ದೆ ಅಸಿ ಆಗ್ತಾ ಆಗ್ತಾ ಊರ್ಗೆಲ್ಲ ಭಯ ಶುರು ಆಗೋಯ್ತು. ದಡ ಜಾಸ್ತಿ ಆಯ್ತು, ಸುಬ್ರಮ್ಮಣ್ಯ ಶಾಸ್ತ್ರಿಗಳ್ಗೆ ಒಂದ್ಸತಿ ನೀರ್ ತರಕ್ಕೇ ಅರ್ಧಗಂಟೆ ಬೇಕಾಗ್ತಿತ್ತು. ಕೊನೆಗೆ ಅದ್ ಹೆಸ್ರಿಗ್ ನದಿ ಆಯ್ತಷ್ಟೇ. ನೀರ್ ಕಾಣ್ಸ್ತಿತ್ತು, ಅಷ್ಟೇ.

ಊರ್ನಲ್ಲಿ ಇದ್ರ ಬಗ್ಗೆನೇ ಮಾತ್ ಬೆಳ್ದಿದ್ದು.

‘ಏನ್ರೀ ಈ ಸತಿ ಮಳೆನೇ ಬರ್ಲಿಲ್ಲ!’

‘ವೂನ್, ನಾನೂ ಅಂಬಾರಳ್ಳಿ ಕಿಟ್ಟಪ್ಪನ್ ಕೇಳಿದ್ನಿ. ಮಳೆ ಬರತ್ತೇನಾರ ಅಂತ. ಅವ್ನು ಮೇಲ್ ನೋಡಂದ ಇನ್ನೊಂದ್ ತಿಂಗ್ಳು ಬರಕಿಲ್ಲಕ್ಕೋ ಅಂತ.’

‘ಏ, ಸುಮ್ನಿರೇ. ಅವ್ನಿಗೇನ್ ಗೊತ್ತಾಗತ್ತೆ.’

‘ಅವ್ರೆಲ್ಲ ರೈತ್ರಪ್ಪಾ. ಮುತ್ತಾತನ್ ಕಾಲ್ದಿಂದ್ಲೂ ಮಳೆ ವಿಚಾರ್ದಲ್ಲೆತ್ತಿದ್ ಕೈ!’

ಅಲ್ಮೇಲಮ್ಮ ಹೀಗೆ ಮಾತಾಡ್ತಾ ಅಂದಿದ್ದು: ‘ಈಗ್ ನದೀನೂ ಚಿಕ್ಕದಾಗೋಯ್ತಲ್ಲ. ಏನ್ ಕತೆ ಅಂತೀನಿ. ಹಸುಗಳ್ಗೇಗ್ ಸ್ನಾನ ಮಾಡ್ಸದು?’

‘ಅದಕ್ಕೇನೆ ಅಲ್ಮೇಲು? ಬಕೀಟ್ನಲ್ ತುಂಬ್ಕೊಂಡ್ ಒರ್ಸದು.’

‘ಕೂತ್ಕೋ ನಿಂಗೇನ್ ಗೊತ್ತಾಗತ್ತೆ?’ ಮತ್ತೊಂದ್ ಮೆಣ್ಸಿನ್ ಮಾತೂ ಹಾಕ್ಬಿಟ್ಳು: ‘ನದಿ ಚಿಕ್ಕ್ದಾಗ್ತಿದೆ ಅಂದ್ರೆ ಪಾಪಾನೇ ಇದು ಅಂತೀನಿ. ವೂನ್ ಮತ್ತೆ, ನದಿ ದೇವ್ರು. ನಂಗಂಸತ್ತೆ ಇದೆಲ್ಲಾ ಆ ಶಾಸ್ತ್ರಪ್ಪನ್ ಕಾಲ್ಗುಣ ಅಂತ.’

‘ಏ, ಏನ್ ಮಾತಡ್ತಿದ್ಯಕ್ಕ?’

‘ಯೋಚ್ನೆ ಮಾಡ್ರಪ್ಪ ನೀವೇ. ಮೂರ್ ವರ್ಷ ಗುಡಿ ಬಾಗಿಲಾಕಿತ್ತು ತಾನೆ? ಆದ್ರೂ ನದಿ ಏಗ್ ತುಂಬರಿತಾಯ್ತು. ಇದೇನ್ ಸುಮ್ನೇನಾ? ಮೂರ್ ನದಿ. ಜಳ್ಳನ್ಬೇಕು. ಈಗ್ನೋಡೆಂಗಾಗಿದೆ. ಬೇಸ್ರ ಆಗಿದೆ ನದಿಗೆ. ಬೇಸ್ರ ಆಗಿದೆ ನಮ್ ಶಿವಂಗೆ.’

‘ಸುಮ್ಮುನ್ ನಿಂದೊಂದು. ಪೂಜೆ ಎಲ್ಲ ಸರಿಗೇ ಆಗ್ತಿಲ್ವಾ?’

‘ಆಗ್ತಿದ್ಯಾ? ನಿಂಗೊತ್ತಿದ್ಯಾ ಪೂಜೆ ಇಶ್ಯಾ? ಗೊತ್ತಿರೋರಂದಾಗ ನಾವೇ ವೋಗಿ ಆ ಶಾಸ್ತ್ರಪ್ಪಂಗೆ ಸಮಾದಾನ ಮಾಡ್ದ್ವಿ. ಅವ್ರೇಳ್ಳಿಲ್ವಾ? ಇವ್ರಿಗೆ ಮಂತ್ರ ಏಳಕ್ಕೂ ಬರಲ್ಲ ಅಂತ. ಅದಿಲ್ಲ ಅಂದ್ರೆ ಯಾವ್ ದೇವ್ರಿಗ್ ತಾನೆ ಏನ್ ಕುಶಿ ಆಗತ್ತೆ?’

ಹೀಗೇ. ಯಾರೇನೆ ಹೇಳಿದ್ರು ಪಾಯಿಂಟ್ ಪಾಯಿಂಟ್ ಹೇಳಿ ಅವ್ರ ಬಾಯ್ಮುಚ್ಚಿಸ್ಬಿಟ್ಳು.

‘ಮಂತ್ರ ಗೊತ್ತಿಲ್ದ್ರೇನು? ಕನ್ಸ್ನಲ್ಲಿ ದೇವ್ರು ಬಂದಿತ್ತಂತೆ ಅಂತ್ ನೀನೇ ಹೇಳ್ದೆ.’

‘ನಾನಂದೆ ಅಂದ್ರೆ ಅವ್ರಂದ್ರು ಅದಕ್ಕೆ. ನಂಗೊತ್ತ ನಿಜಾನಾ ಅಂತ?’

‘ಬ್ರಾಮಣ್ರಾದ್ಮೇಲೆ ಪೂಜೆ ಎಲ್ಲ ಚನ್ನಾಗ್ ಬರಲ್ವಾ? ಶಿವಂಗಿಷ್ಟ ಆಗತ್ ಬಿಡ್ಲಾ.’

‘ವೂನ್, ವೂನ್. ಬ್ರಾಮ್ರಂದ್ರೆ ಬ್ರಾಮ್ರಾ ಅವ್ರು? ನಿಂಗೊತ್ತಿಲ್ಲ. ಶಾರ್ದಮ್ಮಡ್ಗೆ ಮಾಡ್ವಾಗ ವೋಗು ಅವ್ರ್ಮನೆ ಮುಂದೆ ಮಸಾಲೆ ಗಾಟು ಗಮ್ಮನ್ನತ್ತೆ. ಬ್ರಾಮ್ರ್ಮನ್ಲಿ ಆ ಗಾಟ್ಮಾಸಾಲೆ ಆಕ್ತರಾ?’

ಇದು ಹೊಸ ಸುದ್ದಿನೇ ಆಗಿತ್ತು.

‘ಮತ್ ನೋಡೀಪ್ಪಾ. ಅವ್ರ್ ಬಂದು ಗೌರಮ್ಮನ್ ಮನ್ಲೂಟ ಮಾಡಿದ್ರು. ಗೌರಮ್ ಗೊಟಕ್ ಅಂದ್ಲು. ಆಗ್ಲೇ ನಾನ್ ನೋಡ್ಬೇಕಿತ್ತು! ಎಲ್ಲಾನು ಸಮ್ನಾಗ್ ನೋಡಿ. ಅವ್ನ ಪಾಪ, ನಮಗ್ ಶಿಕ್ಷೆ.’

ಅಲ್ಮೇಲಮ್ಮನ್ ಮಾತೂ ಕಾಡ್ಬೆಂಕಿ ತರ ಊರಲ್ಲೆಲ್ಲ ಹರಡ್ತು. ಮನೆ ಹೆಂಗಸ್ರ ಮಾತ್ ಕೇಳ್ಕಂಡು ಗಂಡಸ್ರೆಲ್ಲ ಅಧ್ಯಕ್ಷರ ಹತ್ರ ಬಂದ್ರು.

‘ಥ, ನೀವೆಲ್ಲ ಏನ್ ಇದ್ನ ನಂಬದು? ಆ ಯಪ್ಪ ಅವನ್ ಪಾಡಿಗವ್ನು ಪೂಜೆ ಮಾಡ್ಕಂಡಿರ್ತಾನೆ. ಅವ್ನಿಗ್ ಯಾಕೀಪಟ್ಟ ಕಟ್ತೀರಾ?’

‘ಸುಮ್ನೆ ಅಲ್ಲ ಸ್ವಾಮಿ. ಅವ್ನೂರ್ಗೊತ್ತಿಲ್ಲ, ಪೇರ್ಗೊತ್ತಿಲ್ಲ. ಅವ್ನಿಗ್ ಮಂತ್ರ ಗೊತ್ತಿಲ್ಲ ತಂತ್ರ ಗೊತ್ತಿಲ್ಲ. ಬೆಳುಳ್ಳಿ ಹಾಕ್ತರಂತೆ. ಸಾರ್ಗೆ. ಬ್ರಾಮ್ರಾ ಇಲ್ವಾ ಏನು ಗೊತ್ತಿಲ್ಲ. ಇಷ್ಟೊರ್ಷ ಇದಿವಿಲ್ಲಿ ನದಿ ಬತ್ತೋಗಿದ್ಯಾ?’

ವಿಷ್ಯ ಶಾರ್ದಮ್ಮಂಗೂ ಸುಬ್ರಮ್ಮಣ್ಯಶಾಸ್ತ್ರಿಗಳ್ಗೂ ಗೊತ್ತಾಯ್ತು. ರಾತ್ರಿ ಮುಸ್ಕಾಕೊಂಡು ಶಾಸ್ತ್ರಿಗಳು ಅಧ್ಯಕ್ಷ್ರ ಮನೆಗ್ ಬಂದ್ರಂತೆ. ಊರ್ಬಿಟ್ಟೋಗೋದನ್ ಹೇಳಕ್ಕೆ. ‘ಯಾರೋ ಮಾತಾಡ್ತರೆ ಅಂತ ನೀವ್ ಶಿವನ್ಪಾದ ಬಿಡಕ್ಕಾಗತ್ತಾ ಶಾಸ್ತ್ರಿಗಳೇ? ನೀವೇ ಯೋಚ್ನೆ ಮಾಡಿ. ನಮ್ಗೆಲ್ಲ ನೀವೇ ಗತಿ ಅನ್ಕಳಿ. ಆ ಶಿವಂಗ್ ಬೇಡ್ಕಳಿ,’ ಅಂತ ಅವ್ರು ತಿಪ್ಪೆ ಸಾರ್ಸಿ ಕಳ್ಸಿದ್ರಂತೆ.

ಶಾರ್ದಮ್ಮ ಮನೆಯಿಂದ ಹೊರಗೇ ಬರ್ಲಿಲ್ಲ. ಹೊಲಕ್ಕೂ ಇಲ್ಲ, ಗದ್ದೆಗೂ ಇಲ್ಲ. ಕತ್ಲಾದ್ಮೇಲೆ ಮನೆ ಹೊರಗ್ ಬೆಳಿತಿದ್ ಹೂಗಳನ್ ಕೀಳಕ್ಕೆ ಸೆರಗ್ನ ಮುಖಕ್ ಮುಚ್ಕೊಂಡು ಬರ್ತಿದ್ರು. ಅವ್ರು ಸಾರಿಗ್ ಬೆಳುಳ್ಳಿ ಹಾಕದ್ ಬಿಟ್ರೆ, ಸುಬ್ರಮ್ಮಣ್ಯಶಾಸ್ತ್ರಿ ಊಟಾನೇ ಬಿಟ್ಬಿಟ್ರು. ನಾಲಕ್ ಗಂಟೆ ಬೆಳಗ್ಗೆ ಎದ್ದೊಂದಿನ ದೇವಸ್ಥಾನಕ್ಕೋದೋರು ಅಲ್ಲೇ ವಾಸನೂ ಶುರು ಮಾಡ್ಬಿಟ್ರು. ಊಟ ಇಲ್ಲ. ನಿದ್ದೆ ಗೊತ್ತಿಲ್ಲ. ದಿನ್ಪೂರ್ತಿ ಧ್ಯಾನ ಅಂತ್ ಅಲ್ಲೇ.

ಅಲ್ಮೇಲಮ್ಮ ಮಾತ್ ನಿಲ್ಸ್ಲಿಲ್ಲ: ‘ಬಾಗ್ಲಚ್ಕ್ಂಡ್ಬಿಟ್ರೇ ಮಂತ್ರ ಬಂಬಿಡತ್ತಾ? ಪೂಜೆ ಮಾಡಕ್ ಗೊತ್ತಿರ್ಬೇಕಲ್ಲ. ಶಿವಂಗೆ ಕೋಪ ಬಂದಾಗಿದೆ. ಗೊತ್ತಲ್ಲ. ಮೂರ್ನೇ ಕಣ್ ಬಿಟ್ರೆ ಶಿವ, ನೀರೂ ವೋಯ್ತು, ಊರೂ ವೋಯ್ತು.’

ನಂಗನ್ಸತ್ತೆ ಬೇಸತ್ತೋದ್ರು ಶಾಸ್ತ್ರಿಗಳು ಅಂತ. ಅವ್ರು ಬಾಗ್ಲಚ್ಕೊಂಡು ಶಿವಂಗ್ ಬೇಡ್ತಿದ್ರೋ, ಅಳ್ತಾ ಕೂತಿದ್ರೋ. ಶಾರ್ದಮ್ಮ ಅಂತು ಅಳ್ತಿದ್ರು ಅಂತ್ ಗೊತ್ತಾಗ್ತಿತ್ತು. ಕಣ್ ದಪ್ಪ ಆಗಿರೋದು. ನಲ್ವತ್ತೆಂಟ್ ದಿನ ಹಾಗ್ ದೇವಸ್ಥಾನದಲ್ ಕೂಡಾಕ್ಕೊಂಡಿದ್ದೌರು ಶಾಸ್ತ್ರಿಗಳು ಮನೆಗ್ ಬಂದ ರಾತ್ರಿ ನಮ್ಗೆಲ್ಲ ಜೋರಾಗ್ ಗುಡ್ಗಿನ್ ಶಬ್ದ ಕೇಳಿಸ್ತು. ಇಡೀ ಊರೇ ಹೊರಗ್ ಬಂದಿತ್ತು ಅನ್ಸತ್ತೆ, ಮೊದ್ಲ ಹನಿಗಳ್ನ ನೋಡಕ್ಕೆ. ದೊಡ್ಡ ಮಳೆ. ಜೋರ್ಮಳೆ. ರಾತ್ರಿ ದಿನಾ ದಿನಾ ರಾತ್ರಿ ಕತ್ಲಲ್ಲೇ ಇದ್ವಿ ಅಂತನ್ಸೋ ತರ. ಮಣ್ಣೆಲ್ಲ ಕೊಚ್ಚೆಯಾಯ್ತು. ಅಲ್ಮೇಲಮ್ಮನ್ ಹಸುಗಳ್ ಸಗ್ಣಿ ವಾಸ್ನೇ ಊರೆಲ್ಲಾ ಹರಡ್ತು. ರಾತ್ರಿ ಗಾಳಿ ಬೇರೆ. ಯಾರೂ ಮಲಗ್ಲಿಲ್ಲ ಸರೀಗೆ. ಶಬ್ದ. ಏನೋ ಬ್ರಾಂತು ತರ. ಒಂತರಾ ಭಯ.

ರಾತ್ರಿ ಕಳ್ದು ಬೆಳಗಾದಂಗೆ ಅಧ್ಯಕ್ಷರ್ ಜೊತೆ ಒಂದಿಷ್ಟ್ ಜನ ಶಾಸ್ತ್ರಿಗಳ್ ಮನೆಗ್ ಹೋದಾಗ ಶಾರ್ದಮ್ಮ ಅವ್ರಲಿಲ್ಲ ಅಂತೇಳಿ ಕಳಿಸ್ಬಿಟ್ರು. ‘ಮಳೆ ಮಧ್ಯದಲ್ಲೇ ನಮ್ಮನ್ ಕಾಪಾಡಿದಾನೆ ಶಿವ, ಹೋಗ್ ನಮ್ಸ್ಕಾರ ಮಾಡ್ಬೇಕು ತಕ್ಷ್ಣಾನೆ, ಮಳೆ ಜಾಸ್ತಿ ಆದ್ರೆ ನಿಂತ್ಮೇಲ್ ಬರ್ತಿನಿ ಅಂತ್ ಹೋದ್ರು. ಇನ್ನೂ ಬಂದಿಲ್ಲ,’ ಅಂತ ಬಾಗಿಲ್ ಹಾಕೊಂಡ್ರು. ಪಾಪದ್ ಹೆಣ್ಣು, ನಿದ್ದೆ ಮಾಡಿರ್ಲಿಲ್ಲ.

ಸುಬ್ರಮ್ಮಣ್ಯಶಾಸ್ತ್ರಿಗಳು ಆದ್ರೆ ಎಲ್ಲೂ ಕಾಣೆ. ದೇವಸ್ಥಾನದಲ್ಲಿ ದೀಪ ಉರಿತಿತ್ತು. ಮಣ್ಮಣ್ ಕಾಲ್ಗುರುತಿತ್ತು. ಶಾಸ್ತ್ರಿಗಳಿಲ್ಲ. ಇರ್ಬೌದಾದ್ ಜಾಗ್ದಲ್ಲೆಲ್ಲ ಹುಡ್ಕಿದ್ರು, ಉಹೂನ್, ಎಲ್ಲೂ ಇಲ್ಲ. ಶಾರ್ದಮ್ಮ ಪ್ರತಿ ದಿನ ದೇವಸ್ಥಾನಕ್ಕ್ ಹೋಗ್ ಬರೋರು. ಶಾಸ್ತ್ರಿಗಳಿಲ್ಲ. ಎರಡೇ ದಿನ ಗೊತ್ತಾಯ್ತು. ನಾಲಕ್ ಫರ್ಲಾಂಗ್ ದೂರ್ದಲ್ಲಿರೋ ಕುರೂರಿನ್ ನದಿಬಂಡೆಗಳ್ ಮಧ್ಯ ಶಾಸ್ತ್ರಿಗಳ್ ಬಾಡಿ ಸಿಕ್ಬಿದ್ದಿತ್ತು ಅಂತ. ಹೆಂಗ್ ಸಿಕ್ಕಾಕೊತೋ ಏನೊ. ಅಲ್ಮೇಲಮ್ಮ ಕತೆ ಹಚ್ಚಿದ್ಳು: ‘ನದಿಗೊಂದ್ ನಮ್ಸ್ಕಾರ ಹಾಕ್ಬೇಕಂತ ವೋಗಿ ಕಾಲ್ಜಾರಿ ಬಿದ್ದಿರ್ಬೇಕು ಪುಣ್ಯಾತ್ಮ. ನಮ್ಗೆಲ್ಲ ಮಳೆ ತಂದ್ಕೊಟ್ರಲ್ಲಪ್ಪೋ, ಅಯ್ಯೋ,’ ಅಂತ. ಜೋರ್ಮಳೆ ಸಮ್ಯದಲ್ಲಿ ನದೀಗ್ ನಮ್ಸ್ಕಾರ ಹಾಕಕ್ ಹೋಗ್ದೇರುವಷ್ಟ್ ಬುದ್ಧಿ ಶಾಸ್ತ್ರಿಗಳಿಗಿತ್ತು ಅಂತ್ ನಂಗನ್ಸತ್ತೆ. ಅಂತೂ ಶಾರ್ದಮ್ಮ ವಿಧ್ವೆಯಾದ್ರು. ಒಂದಿನ ಊರೂ ಬಿಟ್ಟೋದ್ರು. ಎಲ್ಲಿಗೆ? ಈಗೆಲ್ಲಿದರೆ? ನಮಗೊತ್ತಿಲ್ಲ.

ಮತ್ತಿನ್ನೊಂದ್ ವಿಷ್ಯ.. ನಮ್ ಸಂಗಮೇಶ್ವರ ದೇವಸ್ಥಾನಕ್ ಮತ್ತೆ ಬೀಗ ಹಾಕಿದ್ವಿ. ಈಗ್ ಆರ್ಯೋಳ್ ವರ್ಷ ಆಗಿದೆ. ಯಾರೂ ಪುರೋಹಿತ್ರು ಸಿಕ್ಕಿಲ್ಲ. 

ವಿಘ್ನೇಶ ಹಂಪಾಪುರ,

Leave a Comment

Your email address will not be published. Required fields are marked *

Scroll to Top