ಅವನ ಹೆಸರು ಕಬೀರ್.
ನಾನವನನ್ನು ಮೊದಲ ಬಾರಿ ನೋಡಿದ್ದು ಎರಡು ತಿಂಗಳುಗಳ ಹಿಂದೆ. ಅದ್ಹೇಗೆ ಅಷ್ಟು ಚೆನ್ನಾಗಿ ನೆನಪಿದೆಯೆಂದರೆ ಅವನು ಮೊದಲ ಬಾರಿ ನನ್ನ ಕೋಣೆಗೆ ಬಂದ ದಿನವೇ ನಾನು ಈ ಕೆಲಸಕ್ಕೆ ಸೇರಿ ಸರಿಯಾಗಿ ಒಂದು ತಿಂಗಳಾಗಿತ್ತು. ಹೌದು, ನನ್ನ ಕೋಣೆಗೆ ಬಂದ ದಿನ! ಇಪ್ಪತ್ತೈದೋ, ಮೂವತ್ತೋ ಆಗಿರಬಹುದು ಅವನಿಗೆ. ಮಸಾಜ್ ಪಾರ್ಲರಿನಲ್ಲಿ ಕೆಲಸಮಾಡುವ ನನಗೆ, ಥೆರಪಿಸ್ಟ್ ಎಂಬ ಲೇಬಲ್ಲಿನ ನೆರಳಿನಲ್ಲಿ ಕಿಲುಬುಕಾಸಿಗಾಗಿ ಇಷ್ಟವಿಲ್ಲದೆಯೂ ಮೈಮಾರಿಕೊಳ್ಳುವ ನನಗೆ ಇದೇನೂ ಹೊಸದಲ್ಲ. ಹದಿನೆಂಟರ ಹರೆಯದ ಗಿರಾಕಿಗಳೂ ಇಲ್ಲಿ ಬರುತ್ತಾರೆ. ಮೊಮ್ಮಕ್ಕಳನ್ನು ಹೊಂದಿದ್ದರೂ ಮಗಳ ಪ್ರಾಯದ ಹೆಣ್ಣನ್ನು ನೋಡುತ್ತಾ ಜೊಲ್ಲುಸುರಿಸುವ ವೃದ್ಧರೂ ಜೇಬಿನ ತುಂಬಾ ನೋಟುಗಳನ್ನು ತುರುಕಿಕೊಂಡು ಇಲ್ಲಿ ಬರುತ್ತಾರೆ. ಎಲ್ಲೋ ಒಬ್ಬಿಬ್ಬರು ನಿಜವಾಗಿಯೂ ಮೈಕೈ ನೋವೆಂದು ಮಸಾಜ್ ಮಾಡಿಸಿಕೊಳ್ಳಲು ಬರುತ್ತಾರೆಯೇ ಹೊರತು ಉಳಿದವರೆಲ್ಲಾ ತಮ್ಮ ದೇಹಸುಖಕ್ಕೆಂದೇ ಹಣತೆತ್ತು ಬರುವುದು ಇಲ್ಲಿ ಸಾಮಾನ್ಯ. ನೀವು ಈ ಮಾತನ್ನು ಕೇಳಿ ಮುಖ ಕಿವುಚಿಕೊಂಡರೂ ಪರವಾಗಿಲ್ಲ. ಈ ವೃತ್ತಿ ನನಗೆ ಎರಡು ಹೊತ್ತಿನ ರೊಟ್ಟಿಯನ್ನು ಮತ್ತು ಗುರುಗ್ರಾಮದಂಥಾ ನಿರ್ದಯಿ, ದುಬಾರಿ ಮಹಾನಗರದಲ್ಲಿ ತಲೆಯ ಮೇಲೊಂದು ಸೂರನ್ನು ಕೊಟ್ಟಿದೆ.
ಆದರೆ ಕಬೀರ್ ಇವರೆಲ್ಲರಿಂತಲೂ ಭಿನ್ನನಾಗಿದ್ದ. ಆ ದಿನ ಭಾರವಾದ ಹೆಜ್ಜೆಗಳನ್ನಿಡುತ್ತಾ ಬಂದ ಅವನಿಗೆ ಡ್ರೆಸ್ ಚೇಂಜ್ ಮಾಡಲು ಹೇಳಿ, ಮಸಾಜ್ ಟೇಬಲ್ ಮೇಲಿರಿಸಿದ್ದ ತೆಳುವಾದ ಒಳ ಉಡುಪನ್ನು ತೋರಿಸಿ ನಾನು ಹೊರನಡೆದಿದ್ದೆ. ಐದು ನಿಮಿಷದ ನಂತರ ನಾನು ಮಾಲೀಷು ಮಾಡುವ ತೈಲ, ಟವೆಲ್ ಮತ್ತು ಸುಗಂಧದ್ರವ್ಯಗಳೊಂದಿಗೆ ಒಳಬಂದಾಗ ಅವನು ಕೋಣೆಯ ಮೂಲೆಯೊಂದರಲ್ಲಿ ಇಡಲಾಗಿದ್ದ ಸೋಫಾ ಒಂದರಲ್ಲಿ ವಿಷಣ್ಣವದನನಾಗಿ ಕುಳಿತಿದ್ದ. ಮಸಾಜ್ ಟೇಬಲ್ ಮೇಲೆ ಮಟ್ಟಸವಾಗಿ ಮಡಚಿಡಲಾಗಿದ್ದ ಒಳಉಡುಪೂ, ಅದರ ಮೇಲೆ ಇರಿಸಲಾಗಿದ್ದ ಅಲಂಕಾರಿಕ ಪ್ಲಾಸ್ಟಿಕ್ ಹೂವೂ ತಣ್ಣಗೆ ಮಲಗಿದ್ದವು. ಕೋಣೆಯ ಏರ್ ಕಂಡೀಷನರ್ ಮೌನವಾಗಿ ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿತ್ತು. ಮೂಲೆಯೊಂದರಲ್ಲಿ ಅಳವಡಿಸಿದ್ದ ಅತ್ಯಾಧುನಿಕ ಸ್ಪೀಕರ್ ತನ್ನಷ್ಟಕ್ಕೆ ಮಧುರವಾದ ಟ್ಯೂನ್ ಒಂದನ್ನು ಮಂದವಾಗಿ ಹೊರಸೂಸುತ್ತಿತ್ತು. “ಸರ್, ದಯವಿಟ್ಟು ಡ್ರೆಸ್ ಚೇಂಜ್ ಮಾಡಿಕೊಂಡು ಈ ಇನ್ನರ್-ವೇರ್ ಅನ್ನು ಧರಿಸಿ. ಲೆಟ್ ಮಿ ಗೀವ್ ಯೂ ಅ ಮಸಾಜ್” ಎಂದು ನಾನು ವೃತ್ತಿಪರ ವಿನಮ್ರತೆಯಿಂದ ಹೇಳಿದೆ. ಆದರೆ ಆತ ತಾನು ನೆಂಟರ ಮನೆಗೆ ಬಂದಿರುವನೋ ಎಂಬಂತೆ, “ಅ ಗ್ರೀನ್ ಟೀ ಪ್ಲೀಸ್ ಮ್ಯಾಮ್”, ಎಂದ. ಇದ್ಯಾವ ಸೀಮೆಯ ಗಿರಾಕಿಯೋ ಎಂದೆನಿಸಿ ಹೂದಾನಿಯ ಪಕ್ಕದಲ್ಲಿಟ್ಟಿದ್ದ ಇಂಟರ್-ಕಾಂ ನಲ್ಲಿ ರಿಸೆಪ್ಷನ್ ಗೆ ಕರೆ ಮಾಡಿ ಒಂದು ಗ್ರೀನ್ ಟೀ ತರಿಸಿಕೊಂಡೆ. ಅರವತ್ತು ನಿಮಿಷಗಳ ದೇಹದ ಮಾಲೀಷಿಗೆ ಬರೋಬ್ಬರಿ ಮೂರುಸಾವಿರ ರೂಪಾಯಿಗಳನ್ನು ತೆತ್ತು ಆತ ಒಳಗೆ ಬಂದಿದ್ದ. ನಿಮಿಷಗಳು ಉರುಳಿಹೋಗುತ್ತಿದ್ದವು. ಆದರೆ ಇದ್ಯಾವುದರ ಪರಿವೆಯೇ ಇಲ್ಲವೆಂಬಂತೆ ಕುಳಿತಿದ್ದ ಆತನನ್ನು ಕಂಡು ನಿಟ್ಟುಸಿರಿಟ್ಟು ನಾನು ಸೋಫಾದ ಎಡಬದಿಯಲ್ಲಿಟ್ಟಿದ್ದ ಕುಚರ್ಿಯಲ್ಲಿ ಕುಳಿತುಕೊಂಡೆ.
ನನ್ನ ನಿಜವಾದ ಹೆಸರು ಮಾಯಾ ತ್ರಿವೇದಿ. ನನ್ನೂರು ಉತ್ತರಪ್ರದೇಶದಲ್ಲಿರುವ ಒಂದು ಹಿಂದುಳಿದ ಗ್ರಾಮ ಬನತ್. ಕಳೆದ ಜನವರಿಯ ಹತ್ತನೇ ತಾರೀಕಿಗೆ ನನ್ನ ವಯಸ್ಸು ಇಪ್ಪತ್ತು ತುಂಬಿ ಇಪ್ಪತ್ತೊಂದಕ್ಕೆ ಕಾಲಿಟ್ಟಿತ್ತು. ತ್ರಿವೇದಿ’ ಎಂಬ ನಾಮಧೇಯವೊಂದನ್ನು ಬಿಟ್ಟು ಹುಟ್ಟಿಸಿದ ತಂದೆ ಇನ್ನೇನನ್ನೂ ನನಗೂ, ನನ್ನ ತಾಯಿ-ತಂಗಿಯರಿಗೂ ದಯಪಾಲಿಸಿರಲಿಲ್ಲ. ಪ್ರಾಣಿಗಳಿಗೆ ಬಡಿಯುತ್ತಿದ್ದಂತೆ ನಮ್ಮೆಲ್ಲರ ಬೆನ್ನ ಮೇಲೆ ಕೋಲುಗಳನ್ನು ಪುಡಿ ಮಾಡುತ್ತಿದ್ದ ನನ್ನ ಕುಡುಕ ತಂದೆಯ ಬಗ್ಗೆ ಬರೆಯುತ್ತಾ ಹೋದರೆ ದೊಡ್ಡ ಗ್ರಂಥವೇ ಆಗಿಬಿಡುತ್ತದೆ. ನನ್ನನ್ನು ಮತ್ತು ತಂಗಿಯರನ್ನು ಸಾಕಲು ನನ್ನ ತಾಯಿ ಪಟ್ಟ ಪಾಡು ಯಾವ ಶತ್ರುವಿಗೂ ಬೇಡ. ನನ್ನ ವಿದ್ಯಾಭ್ಯಾಸವಂತೂ ಐದನೇ ತರಗತಿಗೇ ನಿಂತುಹೋಯಿತು. ಮನೆಯ ಪರಿಸ್ಥಿತಿಯು ಹೀಗೆಲ್ಲಾ ಹರಿದು ಚಿಂದಿಯಾಗಿದ್ದ ಮಹಾಕಾಲದಲ್ಲೇ ನನ್ನನ್ನು ಹುಟ್ಟಿಸಿದ ತಂದೆಯೆಂಬ ಪ್ರಾಣಿ ಸಿಟಿಯಲ್ಲಿ ಉದ್ಯೋಗ ದೊರಕಿಸಿಕೊಡುವ ಸುಳ್ಳು ಸಬೂಬು ಹೇಳಿ ನನ್ನನ್ನು ಓರ್ವ ಬ್ರೋಕರ್ ಗೆ ಕತ್ತೆಯಂತೆ ಮಾರಿಬಿಟ್ಟಿದ್ದ. ಇದ್ಯಾವುದನ್ನೂ ತಿಳಿದಿರದ ನಾನು ಈ ಬ್ರೋಕರ್ ಜೊತೆ ರೈಲಿನಲ್ಲಿ ಕುಳಿತು ಲಕ್ನೋದಿಂದ ದೆಹಲಿಯವರೆಗೆ ಬಂದಿದ್ದೆ. ದೆಹಲಿಯಿಂದ
ಮಿಲೇನಿಯಮ್ ಸಿಟಿ’ ಎಂಬ ಖ್ಯಾತಿಯುಳ್ಳ ಹರಿಯಾಣಾದ ಗುರುಗ್ರಾಮ್ ಮಹಾನಗರಿಗೆ ನನ್ನನ್ನು ಟ್ಯಾಕ್ಸಿ ಒಂದರಲ್ಲಿ ಕರೆದೊಯ್ಯಲಾಯಿತು. ಈ ಮಹಾನಗರದ ಹೊಳೆಯುವ ಭವ್ಯಕಟ್ಟಡಗಳನ್ನು, ಓಡಾಡುತ್ತಿರುವ ಉದ್ದುದ್ದ ಐಷಾರಾಮಿ ಕಾರುಗಳನ್ನು ನೋಡುತ್ತಾ ಮೈ ಮರೆಯುತ್ತಿದ್ದಾಗಲೇ ದೆಹಲಿ – ಹರಿಯಾಣಾದ ಗಡಿಭಾಗದಲ್ಲಿದ್ದ, ದೆಹಲಿಯ ಏರ್ಪೋಟರ್ಿಗೆ ಹತ್ತಿರವಿದ್ದ ಮಹಿಪಾಲಪುರ ಎಂಬಲ್ಲಿ ನಮ್ಮ ಟ್ಯಾಕ್ಸಿ ನಿಂತುಕೊಂಡಿತ್ತು. ಮೈಮೇಲೆ ಬಂದೆರಗುತ್ತದೆಯೋ ಎಂಬ ಎತ್ತರದಲ್ಲಿ ಹಾರಾಡುತ್ತಿದ್ದ, ದೆಹಲಿಯ ಧರೆಯಿಂದ ಚಿಮ್ಮಿ ಮರೆಯಾಗುತ್ತಿದ್ದ ದೈತ್ಯ ವಿಮಾನವೊಂದನ್ನು ಕಂಡು ನಾನು ಕಣ್ಣರಳಿಸಿ ಬೆರಗಾಗಿದ್ದೆ.
ಮುಂದೆ ನಡೆದಿದ್ದು ಬೇರೆಯೇ ಕಥೆ. ಒಂದು ವಾರದ ಮಟ್ಟಿಗೆ “ಸ್ಪಾ” ಎಂದು ಗತ್ತಿನಿಂದ ಕರೆಯಲ್ಪಡುವ ಮಸಾಜ್ ಮಾಡುವ ವಿಧಾನವನ್ನು ನನಗೆ ಕಲಿಸಿಕೊಡಲಾಯಿತು. ಗ್ರಾಹಕರೊಂದಿಗೆ ವ್ಯವಹರಿಸುವ ವಿಧಾನ, ಅವಶ್ಯವೆನಿಸಿದರೆ ದೇಹಸಂಪರ್ಕವನ್ನು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ, ಎಕ್ಸ್ಟ್ರಾ ಸವರ್ೀಸಸ್’,
ಹ್ಯಾಪೀ ಎಂಡಿಂಗ್’ ಮುಂತಾದ ರಹಸ್ಯ ಕೋಡ್-ವಡರ್್ಗಳ ಒಳಾರ್ಥಗಳು, ತಮ್ಮ ಖಾಸಗಿ ಜಗತ್ತಿನ ಬಗ್ಗೆ ಕಾಪಾಡಿಕೊಂಡಿರಬೇಕಾದ ಗೌಪ್ಯತೆ ಮುಂತಾದವುಗಳನ್ನು ಕೈ ತುಂಬಾ ಸೇರುವ ಹಣದ ಆಮಿಷವೊಡ್ಡಿ ಹೇಳಿಕೊಡಲಾಯಿತು. ವಾರದ ಕೊನೆಯ ದಿನ ಸ್ಪಾ ದ ಮಾಲೀಕ ಆಫೀಸಿಗೆ ಕರೆದು ತನ್ನ ಸಂಸ್ಥೆ ಎಲ್ಲೆಲ್ಲಾ ಹಬ್ಬಿಕೊಂಡಿದೆ ಎಂಬುದನ್ನು ಗತ್ತಿನಿಂದ ಹೇಳುತ್ತಾ ಹೋದ. ಸುಂದರವಾಗಿ ಅಲಂಕೃತವಾಗಿದ್ದ ಅವನ ಆಫೀಸಿನ ದುಬಾರಿ ಟೇಬಲ್ ಮೇಲೆ ಹಲವು ಫೈಲುಗಳನ್ನೂ, ಹಿಂದಿ ಮತ್ತು ಆಂಗ್ಲಭಾಷೆಯ ಹಲವು ಫ್ಯಾಷನ್ ಮ್ಯಾಗಝೀನ್ ಗಳನ್ನೂ ಇರಿಸಲಾಗಿತ್ತು. ಅದ್ಯಾವುದೋ ವಿದೇಶೀ ಸುಗಂಧದ್ರವ್ಯದ ಸುವಾಸನೆ ಕೋಣೆಯಿಡೀ ಹಬ್ಬಿಕೊಂಡಿತ್ತು. ಪಕ್ಕದಲ್ಲಿದ್ದ ಡೊಳ್ಳುಹೊಟ್ಟೆಯ ಲಾಫಿಂಗ್ ಬುದ್ಧನ ಪುಟ್ಟ ಮೂತರ್ಿಯು ನನ್ನನ್ನು ನೋಡುತ್ತಾ ಹಲ್ಲುಕಿರಿದು ನಗುತ್ತಿತ್ತು. ಮಾತಿನೊಂದಿಗೇ ಮಾಲೀಕನ ಬೆರಳುಗಳು ಮೇಜಿನ ಮೇಲಿರಿಸಿದ್ದ ರಿವಾಲ್ವರ್ ಜೊತೆ ಚಕ್ಕಂದ ಆಡಲಾರಂಭಿಸಿದ್ದವು. ಆ ಹವಾನಿಯಂತ್ರಿತ ಕೊಠಡಿಯಲ್ಲೂ ನಾನು ಸಣ್ಣಗೆ ಬೆವರತೊಡಗಿದ್ದೆ.
ಗೊತ್ತುಗುರಿಯಿಲ್ಲವೆಂಬಂತೆ ಕಂಡಕಂಡವರ ಜೊತೆ ಹಾಸಿಗೆ ಹಂಚಿಕೊಳ್ಳುವ ವಿರುದ್ಧ ಮಾಡಿದ ನನ್ನ ಚೀರಾಟ, ಗೋಳಾಟ, ಕೆಂಡಕಣ್ಣಿನ ಮಾಲೀಕನ ಬಂದೂಕಿನ ಸ್ಪರ್ಶದೊಂದಿಗೇ ಸ್ತಬ್ಧವಾಯಿತು. ಆತ ಅದೆಷ್ಟು ಜೋರಾಗಿ ರಿವಾಲ್ವರ್ ಅನ್ನು ಒತ್ತಿ ನನ್ನ ಹಣೆಯ ಮೇಲಿರಿಸಿದ್ದ ಅಂದರೆ, ಇನ್ನೊಂದು ಸದ್ದು ನನ್ನಿಂದ ಹೊರಬಂದರೆ ನಿಜವಾಗಿಯೂ ಕೊಂದೇಬಿಡುವನೇನೋ ಎಂಬಂತಿತ್ತು. ನಾನು ಹೊರಹೋಗಲು ಮಾರ್ಗವೇ ಇಲ್ಲದ ದೊಡ್ಡದೊಂದು ಅಪಾಯಕಾರಿ ಕತ್ತಲ ಕೂಪದಲ್ಲಿ ಸಿಕ್ಕಿಹಾಕಿಕೊಂಡಿದ್ದೆ. “ರಿಯಾನಾ ಲಕ್ಷುರಿ ಸ್ಪಾ” ಎಂಬ ಆಕರ್ಷಕ ನಾಮಫಲಕ ಹೊತ್ತು ನಿಂತ, ನಾಲ್ಕನೇ ಅಂತಸ್ತಿನಲ್ಲಿರುವ ಈ ಕೊಠಡಿಗಳಲ್ಲಿ ವೇಶ್ಯಾವಾಟಿಕೆಯೊಂದು ವ್ಯವಸ್ಥಿತವಾಗಿ ನಡೆಯುತ್ತಿತ್ತು. ಈ ರಿಯಾನಾ ಲಕ್ಷುರಿ ಸ್ಪಾ ದಲ್ಲಿ ನಾನೊಬ್ಬಳೇ ಅಲ್ಲದೆ ಈಶಾನ್ಯ ಭಾರತದ ಮೂವರು ಹುಡುಗಿಯರೂ, ಥಾಯ್ಲೆಂಡಿನ ಇಬ್ಬರು ಸುಂದರ ಹೆಣ್ಣುಮಕ್ಕಳೂ ಇದ್ದರು. ಆದರೆ ಅವರ್ಯಾರೂ ನನ್ನಷ್ಟು ಒತ್ತಡದಲ್ಲಿದ್ದಂತೆ ಕಾಣಲಿಲ್ಲ. ಬಹುಶಃ ಇವೆಲ್ಲಾ ಅಭ್ಯಾಸವಾಗಿರಬೇಕು ಇವರಿಗೆಲ್ಲರಿಗೆ. ನನಗಂತೂ ಅಸಹ್ಯವೂ, ಭಯವೂ, ದುಃಖವೂ ಉಕ್ಕಿಬಂದು ಉಸಿರುಗಟ್ಟಿದಂತಾಗಿ ಬಿಕ್ಕತೊಡಗಿದೆ. ಆ ಈಶಾನ್ಯ ಭಾರತದ ಇಬ್ಬರು ಹೆಣ್ಣುಮಕ್ಕಳು ನನ್ನನ್ನು ಸಂತೈಸುತ್ತಾ, ನನ್ನ ನೀಳಕೂದಲನ್ನು ಪ್ರೀತಿಯಿಂದ ನೇವರಿಸುತ್ತಾ ಒಳಗೆ ಕರೆದೊಯ್ದರು. ಆ ರಾತ್ರಿಯ ಊಟದ ಬಳಿಕ ಎಲ್ಲಾ ಹುಡುಗಿಯರ ದುಃಖದ ಕತೆಗಳು ಕಣ್ಣೀರಿನೊಂದಿಗೆ ವಿನಿಮಯವಾದವು. ತನ್ನ ಹಾಳು ಅದೃಷ್ಟವನ್ನು ಶಪಿಸುತ್ತಾ, ಕಣ್ಣೀರ ಪೊರೆಯನ್ನು ಒರೆಸುತ್ತಾ ನಾನು ಮುಂಬರುವ ಆಪತ್ತುಗಳಿಗೆ ವಿಧಿಯಿಲ್ಲದೆ ಮಾನಸಿಕವಾಗಿ ಸಿದ್ಧಳಾದೆ. ಮರುದಿನ ಇತರರಂತೆಯೇ ನನಗೂ ಒಂದು ಸಮವಸ್ತ್ರವನ್ನೂ, ಕೊಠಡಿಯನ್ನೂ ನೀಡಲಾಯಿತು. ಐ ವಾಸ್ ರೆಡಿ ಫಾರ್ ದ ಜಾಬ್.
ಅಂದಿನಿಂದ ನನಗೊಂದು ಹೊಸ ಹೆಸರನ್ನು ನೀಡಲಾಯಿತು. ಆಯಿಷಾ.
ಹೆಸರಿನಲ್ಲೇನಿದೆ ಮಣ್ಣು. ದಿನಕ್ಕೊಂದು ಹೆಸರು. ಒಬ್ಬೊಬ್ಬನೊಂದಿಗೆ ಒಂದೊಂದು ಹೆಸರು. ಗ್ರಾಹಕರು ಇಲ್ಲಿ ನನ್ನ ದುಃಖದ ಹರಿಕಥೆ ಕೇಳಲೇನೂ ಬರುತ್ತಿರಲಿಲ್ಲ. ಬರುತ್ತಿದ್ದವರಲ್ಲಿ ಹೆಂಡತಿಯ ಕಣ್ಣು ತಪ್ಪಿಸಿ ಮಧ್ಯವಯಸ್ಸಿನ ಪುರುಷರಿದ್ದರು. ಗಲರ್್ಫ್ರೆಂಡ್ ಇದ್ದ ಮತ್ತು ಇಲ್ಲದ ಹರೆಯದ ಹುಡುಗರಿರುತ್ತಿದ್ದರು. ಏದುಸಿರು ಬಿಡುತ್ತಾ ನೋಟುಗಳನ್ನು ಚೆಲ್ಲುತ್ತಿದ್ದ ತಲೆಹಣ್ಣಾದ ಮುದುಕರಿರುತ್ತಿದ್ದರು. ಮುಚ್ಚಿದ ಹವಾನಿಯಂತ್ರಿತ ಕೊಠಡಿಯೊಳಗೆ, ತೈಲದಲ್ಲದ್ದಿದ ತನ್ನ ಕೋಮಲ ಕೈಬೆರಳುಗಳು ಇವರುಗಳ ದೇಹದಲ್ಲೆಲ್ಲಾ ಹರಿದಾಡುತ್ತಿದ್ದಂತೆಯೇ ಇವರ ಹೊರಜಗತ್ತಿನ ತೋರಿಕೆಯ ನಿಯತ್ತು ಮಣ್ಣುಪಾಲಾಗುತ್ತಿತ್ತು. ಕೈ ತುಂಬಾ ಹಣ ಬರುತ್ತಿದ್ದುದೇನೋ ನಿಜ. ಆದರೆ ನಾನು ಮಾನಸಿಕವಾಗಿ ಜರ್ಝರಿತಳಾಗಿದ್ದೆ. ಅಪ್ಪನ ನೆನಪಾದಾಗಲೆಲ್ಲಾ ನನ್ನ ಮೈಮೇಲೆ ಕಂಬಳಿಹುಳು ಹರಿದಾಡಿದಂತಾಗುತ್ತಿತ್ತು. ಆದರೂ ಅಮ್ಮನಿಗೆ ಗುಟ್ಟಾಗಿ ಸ್ವಲ್ಪ ಸ್ವಲ್ಪವೇ ಹಣವನ್ನು ಕಳಿಸುತ್ತಿದ್ದೆ. ತಾನು ಮಾಡುತ್ತಿರುವ ಕೆಲಸದ ಬಗ್ಗೆ ಹೇಳಿ ಅವಳನ್ನು ನೋಯಿಸುವುದು ನನಗೆ ಸುತಾರಾಂ ಇಷ್ಟವಿರಲಿಲ್ಲ. ಕುಡುಕ ಪತಿರಾಯ ತನ್ನ ಮಗಳನ್ನು ಹಾದರಕ್ಕೆ ಕಳಿಸಿದ ಅಂತ ಗೊತ್ತಾದರೆ ಅವನ ರುಂಡವನ್ನು ಚೆಂಡಾಡಿಬಿಡುತ್ತಿದ್ದಳೋ ಏನೋ ಆ ತಾಯಿ. ದಿನಕ್ಕೆ ಇಪ್ಪತ್ತಕ್ಕೂ ಹೆಚ್ಚು ಬಾರಿ ಬೆತ್ತಲಾಗುವುದು ಸುಲಭದ ಮಾತೇನೂ ಆಗಿರಲಿಲ್ಲ. ದಿನವಿಡೀ ಬರುವ ಗ್ರಾಹಕರ ಕಾಮದಾಹ, ಆತುರ, ಬೆವರು, ಎಂಜಲು, ಸಿಗರೇಟಿನ ವಾಸನೆ, ಮದ್ಯದ ಕಮಟು, ಶಕ್ತಿ ಪ್ರದರ್ಶನ, ಒರಟುತನ, ದಾಷ್ಟ್ರ್ಯ ಎಲ್ಲವೂ ಸೇರಿ ಸೂರ್ಯ ಮುಳುಗುತ್ತಿದ್ದಂತೆಯೇ ಮಲದ ಗುಂಡಿಯಿಂದ ಮಿಂದೆದ್ದು ಬಂದಂತಾಗುತ್ತಿತ್ತು ನನಗೆ. ಆದರೂ ಯಾವನೊಬ್ಬನಿಗೂ ನನ್ನ ನಗ್ನ ಬೆನ್ನಿನ ಮೇಲೆ ಅಚ್ಚೊತ್ತಿದ್ದ ಬರೆಗಳು ಕಂಡಿರಲಿಲ್ಲ. ಕನಸುಗಳೇ ಇಲ್ಲದೆ ಕಮರಿಹೋಗಿದ್ದ ನನ್ನ ಖಾಲಿಕಣ್ಣುಗಳಲ್ಲಿ ಮಡುಗಟ್ಟಿದ್ದ ನೋವು ಕಾಣಬಂದಿರಲಿಲ್ಲ.
ಆದರೆ ಕಬೀರ್ ಇವರೆಲ್ಲರಿಗಿಂತಲೂ ಭಿನ್ನನಾಗಿದ್ದ. ಹೀ ವಾಸ್ ಟೋಟಲೀ ಡಿಫರೆಂಟ್.
ಕಬೀರನ ಆ ಮೊದಲ ಭೇಟಿ ನನಗೆ ಇನ್ನೂ ನೆನಪಿದೆ. ಮೊದಲ ಬಾರಿಗೇ ಆತ ನನಗೆ ಸಭ್ಯನಂತೆ ಕಂಡಿದ್ದ. ಅವನ ಮಾತುಗಳಲ್ಲಿ, ಹಾವಭಾವಗಳಲ್ಲಿ ಒಂದು ಪ್ರೀತಿಪೂರ್ವಕ ಆದರವಿತ್ತು. ಕೊಠಡಿಯ ಬಾಗಿಲು ಮುಚ್ಚುತ್ತಿದ್ದಂತೆಯೇ ಇತರರಂತೆ ಬಾಚಿಕೊಳ್ಳಲು ಆತ ಮೈಮೇಲೆ ಬೀಳಲಿಲ್ಲ. ವಿನಮ್ರತೆಯೇ ಮೈವೆತ್ತಂತೆ ಗ್ರೀನ್ ಟೀ ತುಂಬಿದ್ದ ಶ್ವೇತವರ್ಣದ ಪಿಂಗಾಣಿ ಕಪ್ ಅನ್ನು ನನ್ನಿಂದ ತೆಗೆದುಕೊಂಡು ಮಾತಿಲ್ಲದೆ ಕುಡಿಯಲಾರಂಭಿಸಿದ್ದ. ಬಹುಶಃ ಆತ ಮೊಟ್ಟಮೊದಲ ಬಾರಿಗೆ ಸ್ಪಾ ಒಂದರ ಬಾಗಿಲನ್ನು ತಟ್ಟಿದ್ದ. ಪರಿಚಯವಿಲ್ಲದ ತರುಣಿಯೊಬ್ಬಳ ಸಮ್ಮುಖದಲ್ಲಿ ಅರೆನಗ್ನನಾಗುವುದು ಬಹುಶಃ ಅವನಿಗೆ ತೀರಾ ಹೊಸ ವಿಷಯವಾಗಿತ್ತು. ಟೀ ಹೀರುತ್ತಿದ್ದಂತೆಯೇ, ಟೀಯ ಹಬೆ ಅವನ ಸುಂದರ ಹಣೆಯ ಮೇಲೆ ಬೆವರಿನ ಮುತ್ತುಗಳನ್ನು ಪೋಣಿಸುತ್ತಿದ್ದವು. ಅವನ ಮುಖದಲ್ಲಿ ತೀವ್ರವಾದ ಸಂಕೋಚವಿತ್ತು. ಮೆಲ್ಲನೆ ಅದುರುತ್ತಿದ್ದ ಕೈ ಗಳಲ್ಲಿ ಅಳುಕಿತ್ತು. ಅವನ ಎಡಗಾಲು ವಿನಾಕಾರಣ ಒತ್ತಡದಲ್ಲಿದ್ದಂತೆ ಕೀ ಕೊಟ್ಟ ಮಂಗನ-ಆಟಿಕೆಯ ಕತ್ತಿನಂತೆ ಒಂದೇ ಸಮನೆ ಅಲುಗಾಡುತ್ತಿದ್ದವು.
ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಆತ ಮೆಲ್ಲಗೆ ಮಾತನಾಡಲಾರಂಭಿಸಿದ. ನಾನಂತೂ ಏನು ಮಾಡಬೇಕೆಂದೇ ತೋಚದೆ ಸುಮ್ಮನೆ ಕೇಳಲಾರಂಭಿಸಿದೆ. ಅವನ ಹೆಸರು ಕಬೀರ್ ಎಂದೂ, ದೆಹಲಿಯ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆಂಬುದೂ ತಿಳಿದು ಬಂತು. “ಐಯಾಮ್ ಸೋ ಸಾರಿ. ಐ ಜಸ್ಟ್ ವಾಂಟೆಡ್ ಟು ಟಾಕ್… ಯೂ ನೋ ಜಸ್ಟ್ ಟಾಕ್” ಎಂದು ಬೆವರನ್ನು ತನ್ನ ಕಚರ್ೀಫಿನಿಂದ ಒರೆಸಿಕೊಳ್ಳುತ್ತಾ ಕೈ-ಕೈ ಹಿಸುಕಿಕೊಳ್ಳುತ್ತಾ ಸಂಕೋಚದಿಂದ ಹೇಳತೊಡಗಿದ. ಆ ದನಿಯಲ್ಲಿ ಕಿತ್ತು ತಿನ್ನುವ ದೈನ್ಯತೆಯಿತ್ತು. `ಇಗೋ ನಾನು ಶರಣಾದೆ, ನಾನು ಸಾಯುತ್ತಿದ್ದೇನೆ… ನನ್ನನ್ನು ಬದುಕಿಸು’, ಎಂದು ಹೇಳಬಯಸುವ, ಮಾತುಗಳಲ್ಲಿ ಹೊರಬರಲಾಗದ ನೋವಿತ್ತು. ಕಾಮದರಮನೆಯಲ್ಲಿ ಇವೆಲ್ಲವೂ ಹೊಸದಾಗಿದ್ದ ನಾನು ಮೂಕಳಾಗಿದ್ದೆ. ರಾಕ್ಷಸರ ಲೋಕದಲ್ಲಿ ಕಳೆದುಹೋಗಿದ್ದ ನನಗೆ ಮೊದಲ ಬಾರಿಗೆ ಮನುಷ್ಯನೊಬ್ಬನನ್ನು ನೋಡಿದಂತಾಗಿತ್ತು.
ನಾವಿಬ್ಬರೂ ಪೆಚ್ಚುಮೋರೆ ಹಾಕಿಕೊಂಡು ಶಬ್ದಗಳಿಗಾಗಿ ಹುಡುಕಾಡುತ್ತಾ ತಡವರಿಸುತ್ತಿದ್ದಾಗಲೇ ಅರವತ್ತು ನಿಮಿಷಗಳು ಕಳೆದುಹೋಗಿದ್ದವು. ಗೋಡೆ ಗಡಿಯಾರವನ್ನು ತೋರಿಸುತ್ತಾ, “ಸಾರಿ. ಒಂದು ಘಂಟೆಗಿಂತ ಹೆಚ್ಚು ಟೈಂ ತೆಗೆದುಕೊಳ್ಳೋ ಹಾಗಿಲ್ಲ ನೀವು”, ಎಂದು ಸಂಕೋಚದಿಂದಲೇ ಹೇಳಿದೆ. ಕಬೀರ್ ತಕ್ಷಣ ಎಚ್ಚೆತ್ತವನಂತೆ ಮೇಲೇಳುತ್ತಾ ಪಕ್ಕದಲ್ಲಿರಿಸಿದ್ದ ತನ್ನ ಬ್ಯಾಗನ್ನು ಹೆಗಲಿಗೇರಿಸಿಕೊಂಡು ನನ್ನ ಬಳಿಗೆ ಬಂದ. “ಬಹುಶಃ ನಿಮ್ಮ ಟೈಂ ವೇಸ್ಟ್ ಮಾಡಿದೆ ಅನ್ಸುತ್ತೆ. ಆದರೆ ಯಾರೊಂದಿಗಾದರೂ ಮಾತನಾಡಬೇಕು ಅಂತ ತೀವ್ರವಾಗಿ ಅನ್ನಿಸಿತ್ತು. ಬಟ್ ಯಾರೊಂದಿಗೆ ಅಂತಲೇ ಗೊತ್ತಾಗಲಿಲ್ಲ. ಸುಮ್ಮನೆ ಪೆದ್ದನಂತೆ ಇಲ್ಲಿ ಬಂದುಬಿಟ್ಟೆ. ಬೇಜಾರಾಗಿದ್ದರೆ ಕ್ಷಮಿಸಿ”, ಎಂದು ವಿಧೇಯನಾಗಿ ಶುದ್ಧ ಹಿಂದಿಯಲ್ಲಿ ಉಸುರಿದ. ದೆಹಲಿಗೆ ಬಂದ ಮೇಲೆ ಮೊದಲ ಬಾರಿಗೆ ಪುರುಷಾಕೃತಿಯಂದು ತನ್ನಲ್ಲಿ ಗೌರವದಿಂದ ನಡೆದುಕೊಂಡಿತ್ತು. ಸುಮ್ಮನೆ ಸೌಮ್ಯ ನಗೆಯೊಂದನ್ನು ಬೀರಿ ಅವನನ್ನು ಬೀಳ್ಕೊಟ್ಟೆ.
ನಿಜಕ್ಕೂ ಅಂಥದ್ದೇನೂ ಅವನು ಮಾತನಾಡಿರಲಿಲ್ಲ. ಒಂದು ಘಂಟೆಯ ಈ ಸಮಯಕ್ಕೆ ಮೂರು ಸಾವಿರವನ್ನು ತೆತ್ತು ಏನಪ್ಪಾ ಈತ ಸಾಧಿಸಿದ ಎಂದು ನನಗನಿಸಿತು.
ಸರಿಯಾಗಿ ಒಂದು ವಾರದ ಬಳಿಕ ಕಬೀರ್ ಎರಡನೇ ಬಾರಿಗೆ ಬಂದಿದ್ದ. ಅವನನ್ನು ನೋಡಿ ಆಶ್ಚರ್ಯವೂ, ಖುಷಿಯೂ ಒಮ್ಮೆಲೇ ನನಗಾಯಿತು. ಈ ಬಾರಿ ಒಂದು ಉದ್ದನೆಯ ಕ್ಯಾಡ್ಬರಿ ಚಾಕ್ಲೇಟಿನೊಂದಿಗೆ ಕಬೀರ್ ಬಂದಿದ್ದ. ಮೊದಲ ಭೇಟಿಯಲ್ಲಿದ್ದ ಕಳವಳ, ಆತಂಕ ಈ ಬಾರಿ ಅಷ್ಟಾಗಿ ಕಾಣಲಿಲ್ಲ. ನೆಂಟರ ಮನೆಗೆ ಬಂದವನಂತೆ ಬಂದು, ಸುಮ್ಮನೆ ಸೋಫಾದ ಮೇಲೆ ನೆಟ್ಟಗೆ ಕೈಕಟ್ಟಿ ಕೂತು, ನಗೆ ಬೀರಲು ಪ್ರಯತ್ನಿಸುತ್ತಾ “ಹಾಯ್ ಆಯಿಷಾ” ಎಂದ. ನಾನು ಮುಗುಳ್ನಗುತ್ತಾ ಫೋನೆತ್ತಿ ಗ್ರೀನ್ ಟೀಗೆ ಆರ್ಡರ್ ಮಾಡಿದೆ.
ಈ ಬಾರಿಯೂ ಆತ ಮಸಾಜ್ ಟೇಬಲ್ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. “ನಿಮ್ಮನ್ನು ಭೇಟಿಯಾಗಿ ಸಂತೋಷವಾಯಿತು. ಅದ್ಕೇ ಇನ್ನೊಮ್ಮೆ ಬಂದೆ”, ಎಂದು ತುಂಬಿದ ಸಭೆಯೊಂದರಲ್ಲಿ ಹುಡುಗಿಯೊಬ್ಬಳನ್ನು ಪ್ರಪೋಸ್ ಮಾಡುತ್ತಿರುವ ಕಾಲೇಜು ಸ್ಟೂಡೆಂಟಿನಂತೆ ಸಂಕೋಚದಿಂದಲೇ ಮಾತು ಆರಂಭಿಸಿದ ಕಬೀರ್. “ಡಿಪ್ರೆಷನ್ ಥರಾ ನಂಗೆ. ತುಂಬಾನೆ ಲೋನ್ಲಿನೆಸ್. ಯಾರಾದರೊಬ್ಬರೊಂದಿಗೆ ಮಾತನಾಡಿ ತಲೆಯನ್ನೆಲ್ಲಾ ಖಾಲಿ ಮಾಡಿಬಿಡೋಣ ಅಂತೆಲ್ಲಾ ಅನ್ನಿಸುತ್ತೆ. ಫ್ರೆಂಡ್ಸ್ ಜೊತೆ ಹೇಳಲಿಕ್ಕೆ ಭಯ, ಹಿಂಜರಿಕೆ. ಮನೆಯಲ್ಲಂತೂ ಇದೆಲ್ಲಾ ಹೇಳಲಾಗುತ್ತದೆಯೇ. ನಾನ್ಯಾರೆಂದೇ ನಿಮಗೆ ಗೊತ್ತಿಲ್ಲ ನೋಡಿ. ನಾನು ಏನು ಹೇಳಿದರೂ ನೀವೇನೂ ಜಡ್ಜ್ ಮಾಡಲ್ಲ ಅಂತ ಒಂದು ಕೆಟ್ಟ ಧೈರ್ಯ”, ಅಂತೆಲ್ಲಾ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡು ತಪ್ಪೊಪ್ಪಿಕೊಳ್ಳುವ ಮಗುವಿನಂತೆ ತಲೆಯಾಡಿಸುತ್ತಾ ಹೇಳತೊಡಗಿದ. ನನಗಂತೂ ಅಯ್ಯೋ ಅನಿಸಿತು. ಸುಮ್ಮನೆ ಅವನು ಹೇಳುವುದಕ್ಕೆಲ್ಲಾ ಚಾಕಲೇಟು ಚೀಪುತ್ತಾ ತಲೆಯಾಡಿಸಿದೆ.
ಈ ಬಾರಿಯೂ ಅರವತ್ತು ನಿಮಿಷಗಳು ಸುಮ್ಮನೆ ಕಳೆದುಹೋದವು. ಆತ ಬ್ಯಾಗನ್ನು ಹೆಗಲಿಗೇರಿಸಿ “ಬಾಯ್” ಹೇಳಿ ಹೊರನಡೆದ.
ತದನಂತರ ಕಬೀರ್ ನಮ್ಮ ಸ್ಪಾ ಗೆ ನಿರಂತರವಾಗಿ ಬರಲಾರಂಭಿಸಿದ. ವಾರಕ್ಕೆ ಅವನ ಕನಿಷ್ಠ ಮೂರು ಭೇಟಿಯಂತೂ ಇರುತ್ತಿತ್ತು. ಪ್ರತೀ ಬಾರಿಯೂ ಫೋನ್ ಮಾಡಿ “ಆಯಿಷಾ ಜೊತೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿ” ಎಂದು ರಿಸೆಪ್ಷನ್ನಿಗೆ ಕರೆ ಮಾಡಿ ಕೇಳುತ್ತಿದ್ದನಂತೆ. “ಅರೇ ತೇರೇ ಸೆ ಪ್ಯಾರ್ ಹೋಗಯಾ ಕ್ಯಾ ಇಸ್ ಲಡ್ಕೇ ಕೋ”, ಎಂದು ಸ್ಪಾ ಮ್ಯಾನೇಜರ್ ತಾನ್ಯಾ ಶಮರ್ಾ ಮಾತಲ್ಲೇ ಕಾಲೆಳೆಯುತ್ತಿದ್ದಳು. ಪ್ರತೀ ಭೇಟಿಯಲ್ಲೂ ಚಾಕ್ಲೇಟೋ, ಪುಟ್ಟ ಗುಲಾಬಿಯೋ ಅವನ ಕೈಯಲ್ಲಿರುತ್ತಿತ್ತು. ಅವನು ಬಂದಾಗಲಂತೂ ನನಗೆ ದಿನದ ಒಂದು ಬಿಡುವು ತನಗಾಗಿಯೇ ಬಾಗಿಲು ಸರಿಸಿ ಬಂದಂತಾಗುತ್ತಿತ್ತು. ಅವನ ಕಣ್ಣುಗಳನ್ನು ನೋಡುತ್ತಲಿದ್ದರೆ ವಿಶ್ವಾಸಕ್ಕೆ ಅರ್ಹ ಎಂಬುದಾಗಿ ನನ್ನ ಮನಸ್ಸು ಸಾರಿ ಹೇಳುತ್ತಿತ್ತು.
ಕಬೀರ್ ಪ್ರತೀ ಬಾರಿ ಬಂದು ಕೂತಾಗಲೂ ಏನೋ ಹೇಳಬೇಕಾಗಿರುವುದನ್ನು ಹೇಳಿ ಹಗುರಾಗಲು ಬಂದಿದ್ದಾನೆ ಎಂದು ಅನ್ನಿಸುತ್ತಿತ್ತು. ದಾರದಲ್ಲಿ ಪೋಣಿಸಿಟ್ಟ ಮುತ್ತಿನಂತೆ ಸೌಮ್ಯ ಮಾತುಗಳು ಅವನ ತುಟಿಯಿಂದ ಹೊರಬೀಳುತ್ತಿದ್ದವು. ಆದರೆ ಅದುಮಿಟ್ಟ ಭಾವನೆಗಳು ಮಾತುಗಳಾಗಿ ಹೊರಬಾರದೆ ಅವನನ್ನು ಪ್ರತೀಕ್ಷಣವೂ ಕೊಲ್ಲುತ್ತಿದ್ದವು. ಕಬೀರನ ಶುದ್ಧ ಹಿಂದಿಯ ಮಾತುಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾವ್ಯಾತ್ಮಕವಾದ ಉದರ್ು ಶಬ್ದಗಳು ಇಣುತ್ತಿದ್ದವು. ಆದರೂ ಅವನ ಮಾತುಗಳು ಹರಿಯುವ ಮುಕ್ತಝರಿಯಂತಿರದೆ ಸಾಗರದ ಜಲರಾಶಿಯನ್ನು ಬೊಗಸೆಯಲ್ಲಿ ತಂದು ಪಾತ್ರೆಯೊಂದರಲ್ಲಿ ತುಂಬಿಸುವ ಬಾಲಿಶ ಪ್ರಯತ್ನದಂತೆ ಕಂಡುಬರುತ್ತಿತ್ತು. “ಆಯಿಷಾ… ಯೂ ಲುಕ್ ಬ್ಯೂಟಿಫುಲ್”, ಎಂಬ ಒಂದು ವಾಕ್ಯವನ್ನಾಡಲೂ ಕಬೀರ್ ಸಂಕೋಚದಿಂದ ಒದ್ದಾಡುತ್ತಿದ್ದ. ಬಹುಶಃ ನನಗೇನನ್ನಿಸುತ್ತೋ ಏನೋ, ಗೆಟ್ ಔಟ್ ಯೂ ಈಡಿಯಟ್ ಎಂದು ಕೂಗಾಡುತ್ತೇನೋ ಎಂಬ ಭಯವಿರಬೇಕು ಅವನಿಗೆ. ಒಂದು ದಿನವಂತೂ ತನ್ನನ್ನು ತಾನು ಆತ ಬಹುವಾಗಿ ದ್ವೇಷಿಸುತ್ತಿರುವನೆಂದೂ, ಹಲವು ಬಾರಿ ಆತ್ಮಹತ್ಯೆಗೆ ವಿಫಲ ಪ್ರಯತ್ನವನ್ನು ಮಾಡಿರುವೆನೆಂದೂ ನೊಂದು ಹೇಳಿದ. ಅವನ ಮಾತುಗಳಲ್ಲಿ ಅಭದ್ರತೆಯ ಭಾವಗಳು, ಹತಾಶೆ, ಅಸಹಾಯಕತೆ, ಖಿನ್ನತೆ, ಕೀಳರಿಮೆಗಳು ತುಂಬಿ ತುಳುಕುತ್ತಿದ್ದವು. ಮೊಟ್ಟಮೊದಲ ಬಾರಿಗೆ ನಾನವನ ಬಳಿ ಹೋಗಿ ಸಂತೈಸುವಂತೆ ಅವನ ಕೈಗಳನ್ನು ಮೃದುವಾಗಿ ಅದುಮಿದೆ. ಅವನ ಕಣ್ಣುಗಳು ಮಂಜಾಗಿದ್ದವು.
ಕೋಟಿಗಟ್ಟಲೆ ಜನರಿಂದ ತುಳುಕುತ್ತಿದ್ದ ಈ ಮಹಾನಗರಿಯಲ್ಲಿ ಅವನೊಬ್ಬ ಏಕಾಂಗಿಯಾಗಿದ್ದ. ಹೀ ವಾಸ್ ಅ ಲೋನ್ಲೀ ಮ್ಯಾನ್.
ಕಬೀರ್ ತನ್ನ ಏಕಾಂಗಿತನವನ್ನು ನೀಗಿಸಿಕೊಳ್ಳಲು ಸ್ಪಾ ನೆಪದಲ್ಲಿ ನನ್ನಲ್ಲಿಗೆ ಬರುವುದು ಸ್ಪಷ್ಟವಾಗಿತ್ತು. ಘಂಟೆಗೆ ಮೂರು ಸಾವಿರ ತೆತ್ತು ಮಾತನಾಡುವುದಕ್ಕಷ್ಟೇ ಅವನು ಬರುತ್ತಿದ್ದ. ಅವನ ಏಕಾಂಗಿತನದ ಭಾರವು ಇಲ್ಲದ ಅಸಹಾಯಕತೆಯಿಂದ ನನ್ನ ಸಮಯವನ್ನು ಖರೀದಿಸಿ, ಸ್ಪಾ ದ ಬೊಕ್ಕಸವನ್ನು ತುಂಬಿಸುತ್ತಿತ್ತು. ಅವನನ್ನು ನೋಡಿದಾಗಲೆಲ್ಲಾ ನನಗೆ ಅನುಕಂಪ ಮೂಡುತ್ತಿತ್ತು. ಪ್ರೀತಿಗೆ ಹಂಬಲಿಸುವ ಜೀವ ಅದಾಗಿತ್ತು ಅಷ್ಟೇ. ಬಹುಶಃ ಅವನ ಮಾತುಗಳಿಗೆಲ್ಲಾ ಕಿವಿಯಾಗಬಲ್ಲ, ಅವನ ನೋವನ್ನು ಅರಿತು ಸಂತೈಸಬಲ್ಲ ಜೀವವೊಂದೇ ಅವನಿಗೆ ಬೇಕಾಗಿದ್ದಿದ್ದು. ಹಿ ನೀಡೆಡ್ ಹೆಲ್ಪ್. ಆದರೆ ನಾನಾದರೂ ಏನು ಮಾಡಬಲ್ಲವಳಾಗಿದ್ದೆ. ಈ ಖಿನ್ನತೆ, ಅಭದ್ರತೆಯೆಲ್ಲಾ ನನ್ನ ಬುದ್ಧಿಮಟ್ಟಿಗೆ ನಿಲುಕದ ಮಾತುಗಳಾಗಿದ್ದವು. ಐದನೇ ಕ್ಲಾಸಿನ ವಿದ್ಯಾಭ್ಯಾಸವನ್ನಷ್ಟೇ ಮಾಡಿದ ನಾನು ಮನುಷ್ಯಳಾಗಿ ಏನಾದರೂ ಮಾಡಬಹುದಿತ್ತೇ ಹೊರತು ಇನ್ನೇನೂ ಇಲ್ಲ. ನನ್ನ ತುಂಡು-ತುಂಡು ಇಂಗ್ಲಿಷ್ ಶಬ್ದಗಳೆಲ್ಲಾ ಈ ದಂಧೆಗಾಗಿ ಎರವಲು ಪಡೆದವುಗಳಾಗಿದ್ದವು. ಹಾಗಾಗಿಯೇ ಅವನಿಗೆ ಬೇಸರವಾಗದಿರಲೆಂದು ಅವನ ಮಾತುಗಳನ್ನು ಸುಮ್ಮನೆ ಕೇಳುತ್ತಿದ್ದೆ. ಅವನ ಹೌದುಗಳಲ್ಲಿ ಹೌದಾಗಿ, ಅಲ್ಲಗಳಲ್ಲಿ ಅಲ್ಲವಾಗುತ್ತಿದ್ದೆ. ಅವನ ಸಂತಸದಲ್ಲಿ ನಗುವಾಗಿ, ದುಃಖದಲ್ಲಿ ಮೌನವಾಗುತ್ತಿದ್ದೆ.
ಆದರೂ ಕಬೀರನಂಥಾ ಸಾಧು ಹುಡುಗ ಇಂತಹಾ ಜಾಗಗಳಿಗೆ ಭೇಟಿಕೊಡುವುದು ನನಗೆ ಸರಿಯೆನಿಸುತ್ತಿರಲಿಲ್ಲ. ಸ್ಪಾ ದ ಮಾಲೀಕ ಪೋಲೀಸರಿಗೆ ಕೈ ತುಂಬಾ ಲಂಚ ಕೊಡುತ್ತಿದ್ದರೂ ಆಗಾಗ ದಾಳಿಗಳು ಆಗುತ್ತಿದ್ದವು. ಶ್ರೀಮಂತ ಕುಟುಂಬದ ಕೆಲ ಪುಂಡ ಯುವಕರು ಬಂದು ಆಗಾಗ ಏನೇನೋ ನಾಟಕ ಮಾಡಿ ಧಾಂಧಲೆಯೆಬ್ಬಿಸಿ, ಕೈ-ಕೈ ಮಿಲಾಯಿಸುತ್ತಿದ್ದರು. ರೇಡ್ ಆದಾಗಲೆಲ್ಲಾ ಪೋಲೀಸರು ನಮ್ಮನ್ನೂ, ಗ್ರಾಹಕರನ್ನೂ ಎಳೆದಾಡಿ, ಜೀಪಿನಲ್ಲಿ ಕೊಂಡೊಯ್ದು ಗಂಟೆಗಟ್ಟಲೆ ಠಾಣೆಯಲ್ಲಿರಿಸುತ್ತಿದ್ದರು. ಆದರೆ ಕೆಲವೇ ಘಂಟೆಗಳಲ್ಲಿ ಸೂಟುಬೂಟಿನ ಮಾಲೀಕ ಬಂದು ಆರಾಮಾಗಿ ನಮ್ಮನ್ನೆಲ್ಲಾ ಬಿಡಿಸಿಕೊಂಡು ಹೋಗುತ್ತಿದ್ದ. ಆದರೆ ಜೈಲಿನಲ್ಲೇ ಲಾಠಿಯೇಟಿನ ಭಯದಿಂದ ಮುದುಡಿ ಕುಳಿತಿದ್ದ ನಮ್ಮ ಗ್ರಾಹಕರ ಕಥೆ ಏನಾಗುತ್ತಿತ್ತು ಎಂಬುದು ನನಗೆ ತಿಳಿಯದ ಸಂಗತಿಯಾಗಿತ್ತು. ಇಂಥಾ ಕೊಂಪೆಗೆ ಕಬೀರನಂಥಾ ಹುಡುಗನೊಬ್ಬ ವಿನಾಕಾರಣ ಬಿದ್ದು ನಾಶವಾಗುವುದು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಇದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು ಒಮ್ಮೆಯಂತೂ, “ನಾನು ನಿನಗೆ ಮನೆಯಿಂದ ಕರೆ ಮಾಡಬಹುದೇ” ಎಂದು ಮುಗ್ಧನಾಗಿ ಕೇಳಿದ್ದ ಕಬೀರ್. ಆದರೆ ಮಾಲೀಕನ ರಿವಾಲ್ವರ್ ನ ಮತ್ತು ಅವನ ಕಣ್ಣುಗಳಲ್ಲಿ ಅಡಗಿದ್ದ ತಣ್ಣನೆಯ ಕ್ರೌರ್ಯದ ನೆನಪಾಗಿ ನಾನು ನಯವಾಗಿಯೇ ಬೇಡ ಅಂದಿದ್ದೆ. “ಐ ಕ್ಯಾನ್ ಅಂಡರ್ಸ್ಟ್ಯಾಂಡ್ ಆಯಿಷಾ” ಅಂದಿದ್ದ ಆ ಜಂಟಲ್-ಮ್ಯಾನ್. ಬಹುಷಃ ಅವನ ಮುಖದಲ್ಲಿ ಎಂದಿನ ಮುಗುಳ್ನಗೆಯಿತ್ತು.
ಅವನು ನನಗಿಷ್ಟವಾಗಿದ್ದ ಅನ್ನುವುದಂತೂ ಸತ್ಯ. ಆದರೆ ನಾನು ಖಂಡಿತವಾಗಿಯೂ ಮೈಮರೆತಿರಲಿಲ್ಲ. ನಾನಿದ್ದ ಸ್ಥಿತಿ ನನಗೆ ಸ್ಪಷ್ಟವಾಗಿ ಅರಿವಿತ್ತು. ಅವನೊಬ್ಬ ಕ್ಲೈಂಟ್ ಅಷ್ಟೇ ಆಗಿರಬೇಕಿತ್ತು ನನಗೆ. ಇವತ್ತು ಬಂದವನು ನಾಳೆ ಬರದಿರಲೂಬಹುದು. ಹಾಗಾಗಿಯೇ ಪ್ರೀತಿಯೆಂಬ ಮಾಯೆಯ ಬಲೆಯಲ್ಲಿ ಬೀಳದೇ ಇರುವಂತೆ ಮನಸ್ಸೆಂಬ ಮರ್ಕಟವನ್ನು ಹದ್ದುಬಸ್ತಿನಲ್ಲಿಟ್ಟಿದ್ದೆ.
ತೋರಿಕೆಯ ಸಮಾಜದ ಕಣ್ಣುಕುಕ್ಕುವ ಬೆಳಕಿನಲ್ಲಿ, ಕತ್ತಲಿನೊಂದಿಗೆ ಲೀನವಾದ ಪರಿಶುದ್ಧ ಮನಸ್ಸಿನ ವೇಶ್ಯೆಯೊಬ್ಬಳಿಗೆ ಪ್ರೀತಿಯ ಜಾಲದಲ್ಲಿ ಬೀಳುವ ಹಕ್ಕಿಲ್ಲ.
ವಿಧಿಯೂ ಕೆಲವೊಮ್ಮೆ ಕಠೋರ ನೋಡಿ. ನಾನೇನು ಆಗಬಾರದೆಂದು ಮನಃಪೂರ್ವಕವಾಗಿ ಬಯಸಿದ್ದೆನೋ, ಆ ದಿನ ಅದುವೇ ಆಗಿಹೋಯಿತು.
ಶನಿವಾರದ ಒಂದು ಸುಂದರ ದಿನ. ಮದ್ಯಾಹ್ನದ ಎರಡೂವರೆ ಕಳೆದಿರಬಹುದು. ಪ್ರಖರ ಸೂರ್ಯ ದೆಹಲಿಯನ್ನು ಇನ್ನಿಲ್ಲದಂತೆ ಸುಡುತ್ತಿದ್ದ. ಆ ದಿನವೂ ಕಬೀರ್ ಗ್ರೀನ್ ಟೀ ಹೀರುತ್ತಾ ಸುಮ್ಮನೆ ಮಾತನಾಡುತ್ತಿದ್ದ. ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ನಂತರ ನಮ್ಮ ಕೊಠಡಿಯ ಬಾಗಿಲಾಚೆಗೆ ಏನೋ ಶಬ್ದಗಳು ಕೇಳಿಬಂದವು. ಕ್ಷಣಾರ್ಧದಲ್ಲೇ ಮೂವರು ದೃಢಕಾಯಿಗಳು ಮುಚ್ಚಿದ್ದ ಬಾಗಿಲನ್ನು ಭೀಕರವಾಗಿ ಬಡಿಯುತ್ತಾ, ಮುರಿದು ಒಳನುಗ್ಗಿದ್ದರು. ಅದು ಪೋಲೀಸ್ ರೇಡ್ ಎಂಬುದು ನನಗೆ ಅರಿವಾಗಲು ಹೆಚ್ಚಿನ ಸಮಯವೇನೂ ತಗುಲಲಿಲ್ಲ. ಗ್ರಾಹಕರ ಸೋಗಿನಲ್ಲಿ ಬಂದಿದ್ದ ಪೋಲೀಸರು ಸ್ಪಾ ಮೇಲೆ ರೇಡ್ ಮಾಡಿದ್ದರು. ಆದರೆ ದುರಾದೃಷ್ಟವಷಾತ್ ಕಬೀರ್ ಈ ಗಡಿಬಿಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ. ಹರಿಯಾಣವೀ ಮಿಶ್ರಿತ ಹಿಂದಿ ಭಾಷೆಯಲ್ಲಿ ಬೈಗುಳಗಳ ಮಳೆಯನ್ನು ಸುರಿಸುತ್ತಾ ಸಿವಿಲ್ ದಿರಿಸಿನಲ್ಲಿದ್ದ ಆ ಪೋಲೀಸ್ ಅಧಿಕಾರಿ ಕಬೀರನ ಕಾಲರ್ ಹಿಡಿದು ತನ್ನ ರಿವಾಲ್ವರ್ ಅನ್ನು ಅವನ ಹೊಟ್ಟೆಗೆ ತಿವಿಯುತ್ತಾ ಹೆದರಿಸಲಾರಂಭಿಸಿದ್ದ. ನನಗಂತೂ ದಿಗಿಲಾಗಿ ಹೃದಯವೇ ಬಾಯಿಗೆ ಬಂದಂತಾಯಿತು.
“ನನ್ನನ್ನು ಬೇಕಾದರೆ ಕೊಂದುಬಿಡಿ. ನನ್ನಲ್ಲಿರುವುದನ್ನೆಲ್ಲಾ ದೋಚಿಕೊಳ್ಳಿ. ಆದರೆ ದಯವಿಟ್ಟು ನನ್ನನ್ನು ಅರೆಸ್ಟ್ ಮಾಡ್ಬೇಡಿ ಪ್ಲೀಸ್. ಐ ಕಾಂಟ್ ಷೋ ಮೈ ಫೇಸ್ ಟು ಸೊಸೈಟಿ”, ಎಂದು ಕಬೀರ್ ಆ ಅಧಿಕಾರಿಯ ಕೈ-ಕಾಲುಗಳನ್ನು ಹಿಡಿದುಕೊಂಡು ಅಂಗಲಾಚತೊಡಗಿದ. “ಅವನೇನೂ ಮಾಡಿಲ್ಲ ಜನಾಬ್… ಪ್ಲೀಸ್ ಅವನನ್ನು ಬಿಟ್ಟುಬಿಡಿ ಸಾರ್”, ಎಂದು ನಾನು ಗೋಗರೆಯಲಾರಂಭಿಸಿದೆ. ಆದರೆ ನಮ್ಮ ರೋದನೆ ಅಧಿಕಾರಿಯ ದರ್ಪದ ಆರ್ಭಟದೆದುರು ಅರಣ್ಯರೋದನವಾಯಿತು. “ಸೂಳೆಮನೆಗೆ ಬಂದು ಏನೂ ಮಾಡಿಲ್ಲವಂತೆ ಶಾಣಾ ನನ್ಮಗ… ಸುಟ್ಟುಬಿಡುತ್ತೇನೆ ನೋಡು ನಿನ್ನ”, ಎಂದು ಆತ ಕಬೀರನಿಗೆ ಭೀಕರವಾಗಿ ತಿವಿಯುತ್ತಾ ಕಿರುಚತೊಡಗಿದ. ನನ್ನ ಮತ್ತು ಕಬೀರನ ಗೋಳಾಟ ಮುಂದುವರಿಯಿತು. ಆದರೆ ಪೋಲೀಸ್ ಅಧಿಕಾರಿ ಕಬೀರನಿಗೆ ತನ್ನ ರಿವಾಲ್ವರ್ ಅನ್ನು ತೋರಿಸುತ್ತಾ, ತನ್ನ ಬೂಟುಕಾಲಿನಲ್ಲಿ ನಿರ್ದಯವಾಗಿ ತಿವಿಯುತ್ತಾ ಮಜಾ ನೋಡುವುದನ್ನು ಮುಂದುವರೆಸಿದ.
ಅಷ್ಟರಲ್ಲಿ ಒಂದು ವಿಚಿತ್ರ ನಡೆದುಹೋಯಿತು.
ನೋವಿನಿಂದ ತನ್ನ ದೇಹವನ್ನು ಎಳೆಯುತ್ತಾ ಕಬೀರ್ ಓಡಲು ಪ್ರಯತ್ನಿಸುತ್ತಿರುವಂತೆ ನನಗನಿಸಿತು. ಆದರೆ ಪೋಲೀಸರ ಕಡೆಗಿದ್ದ ಬಾಗಿಲ ಕಡೆಗೆ ಬಾರದೆ ಆತ ತನ್ನ ಬೆನ್ನ ಹಿಂದಿನ ಬಾಲ್ಕನಿಯ ಕಡೆಗೆ ತೆವಳಲಾರಂಭಿಸಿದ್ದ. ನಾಲ್ಕನೇ ಮಹಡಿ ಮೇಲಿದ್ದ ನಮ್ಮ ರಿಯಾನಾ ಲಕ್ಷುರಿ ಸ್ಪಾ ದ ಈ ಕೊಠಡಿಯ ಚಿಕ್ಕ ಬಾಲ್ಕನಿಯಂಥಾ ಜಾಗ ಅದಾಗಿತ್ತು. ಅವನು ಈ ಪುಟ್ಟ ಜಾಗಕ್ಕೆ ಹೋಗಿ ಹಾರಿಕೊಂಡು ಪರಾರಿಯಾಗುವುದಿರಲಿ, ನೆಟ್ಟಗೆ ಅಡಗಿಕೊಳ್ಳುವುದಕ್ಕೂ ಅಲ್ಲಿ ಜಾಗವಿರಲಿಲ್ಲ. “ಕಹಾ ಭಾಗ್ ರಹಾ ಹೆ ಸಾಲೇ… ಉಡಾದೂಂಗಾ ತೇರೇ ಕೋ”, ಎಂದು ಭಯೋತ್ಪಾದಕನೊಬ್ಬನಿಗೆ ಸಡ್ಡುಹೊಡೆಯುವಂಥಾ ಪೋಸಿನಲ್ಲಿ ಆ ಅಧಿಕಾರಿ ತನ್ನ ರಿವಾಲ್ವರ್ ಅನ್ನು ಕಬೀರ್ ಕಡೆಗೆ ಗುರಿಯಿಟ್ಟು ತೋರಿಸಿದ. ಕಬೀರ್ ನಾಲ್ಕು ಮಹಡಿಯ ಮೇಲಿರುವ ಆ ಬಾಲ್ಕನಿಯಿಂದ ಹಾರಿ, ಕಾಲುಮುರಿದುಕೊಂಡು ಪರಾರಿಯಾಗುವ ಹುಚ್ಚುಧೈರ್ಯವನ್ನು ಮಾಡಲಾರ ಎಂಬ ಸತ್ಯ ಆ ಪೋಲೀಸ್ ಅಧಿಕಾರಿಗೆ ಸ್ಪಷ್ಟವಾಗಿ ತಿಳಿದಿತ್ತು.
“ವಾಪಾಸ್ ಬಂದು ಬಿಡು… ಇಲ್ಲಾಂದ್ರೆ ಶೂಟ್ ಮಾಡಿ ಸುಟ್ಹಾಕ್ತೀನಿ”, ಅನ್ನುತ್ತಾ ಪೋಲೀಸ್ ಅಧಿಕಾರಿ ತನ್ನ ರಿವಾಲ್ವರ್ ಅನ್ನು ಕಬೀರ್ ಕಡೆಗೆ ಗುರಿಯಿಟ್ಟು ತೋರಿಸುತ್ತಾ ನಿಧಾನಕ್ಕೆ ಅವನೆಡೆಗೆ ಹೆಜ್ಜೆಯಿಡತೊಡಗಿದ. ಅವನು ಈ ಸಾಧು ಹುಡುಗನನ್ನು ಭಯಪಡಿಸುವುದಕ್ಕಷ್ಟೇ ಮಾಡುತ್ತಿರುವ ನಾಟಕ ಎಂದು ನನಗೆ ನಿಸ್ಸಂದೇಹವಾಗಿ ತಿಳಿದಿತ್ತು. ಠಾಣೆಯಲ್ಲಿ ಕೈಲಾಗದವರನ್ನು ಗೋಳುಹೊಯ್ದುಕೊಂಡು ಮೋಜು ನೋಡುವ ಪೋಲೀಸರನ್ನು ನಾನು ಈ ಮೊದಲು ಹಲವು ಬಾರಿ ನೋಡಿದ್ದೆ. ಈ ಅಧಿಕಾರಿಯೂ ಇದಕ್ಕೇನೂ ಹೊರತಾದಂತೆ ಕಾಣಬರಲಿಲ್ಲ. ಕಬೀರ್ ಹೆದರಿ ಕಂಗಾಲಾಗಿದ್ದಾನೆ ಅನ್ನೋ ಒಂದೇ ಕಾರಣಕ್ಕಾಗಿ ರಿವಾಲ್ವರ್ ತೋರಿಸಿ ಅವನನ್ನು ಈತ ಗೋಳುಹೊಯ್ದುಕೊಳ್ಳುತ್ತಿದ್ದ.
ಆದರೆ ವಿಧಿಯು ಬೇರೆಯೇ ಬಗೆದಿತ್ತು.
ಬಾಲ್ಕನಿಯ ಕೊನೆಯ ಮೂಲೆಗೆ ಅಂಟಿಕೊಂಡು ನಡುಗುತ್ತಿದ್ದ ಕಬೀರ್ ನಿಧಾನಕ್ಕೆ ನಿಂತುಕೊಂಡ. ಮಟ್ಟಸವಾಗಿ ಹಿಂದಕ್ಕೆ ಬಾಚಿಕೊಂಡಿದ್ದ ಅವನ ಕೂದಲುಗಳು ಚದುರಿಹೋಗಿದ್ದವು. ಅವನ ಆಕಾಶ ನೀಲಿ ಬಣ್ಣದ ಚೆಂದದ ಶಟರ್ು ಬೆವರಿನಿಂದ, ಅಲ್ಲಲ್ಲಿ ಸೋರುತ್ತಿರುವ ರಕ್ತದ ಕಲೆಗಳಿಂದ ತೊಯ್ದುಹೋಗಿತ್ತು. ಅವನ ಪ್ಯಾಂಟು ಎಳೆದಾಟದ ರಭಸಕ್ಕೆ ಅಲ್ಲಲ್ಲಿ ಹರಿದುಹೋಗಿದ್ದರೆ, ಬೂಟುಗಳು ಇನ್ನೆಲ್ಲೋ ಕಳೆದುಹೋಗಿದ್ದವು. ಕಬೀರ್ ಮೆಲ್ಲನೆ ಏದುಸಿರು ಬಿಡುತ್ತಾ ನನ್ನನ್ನು ದಿಟ್ಟಿಸಿದ. ಅವನ ಕಣ್ಣುಗಳಲ್ಲಿ ಒಂದು ಅದ್ಭುತವಾದ ಪ್ರಶಾಂತತೆಯಿತ್ತು. ಸಾವನ್ನು ಎದುರು ನೋಡುವವನ ಮುಖದಲ್ಲಿ ಇರಬಹುದಾದ ನಿಲರ್ಿಪ್ತತೆಯ ಭಾವವಿತ್ತು. ತುಟಿಯಂಚಿನಲ್ಲಿ ಸಣ್ಣ ಮುಗುಳ್ನಗೆಯಿತ್ತು. ನಾವೆಲ್ಲರೂ ನೋಡುತ್ತಿದ್ದಂತೆಯೇ ತನ್ನ ಬೆನ್ನನ್ನು ಬಾಲ್ಕನಿಗೆ ಆಧಾರವಾಗಿರಿಸಿ, ಎರಡೂ ಕಾಲುಗಳನ್ನು ಮೇಲ್ಮುಖವಾಗಿ ಎತ್ತಿ, ಹಿಮ್ಮುಖವಾಗಿ ಕಬೀರ್ ಧರೆಗುರುಳಿದ.
ಅಷ್ಟು ಹೊತ್ತು ಮೋಜು ನೋಡುತ್ತಿದ್ದ ಪೋಲೀಸ್ ಅಧಿಕಾರಿಯ ಮುಖ ಈ ಅನಿರೀಕ್ಷಿತ ಘಟನೆಯಿಂದ ಕಪ್ಪಿಟ್ಟಿತು. “ಸಾಲಾ… ಹರಾಮೀ…”, ಎನ್ನುತ್ತಾ ಓಡೋಡುತ್ತಾ ಹೋಗಿ ಆತ ಬಾಲ್ಕನಿಯಿಂದ ಕೆಳ ನೋಡಿದ. ನನ್ನನ್ನು ಗಟ್ಟಿಯಾಗಿ ಎರಡೂ ಕೈಗಳಲ್ಲಿ ಬಂಧಿಸಿಟ್ಟಿದ್ದ ಅಧಿಕಾರಿಗಳು ಎದ್ದೆನೋ ಬಿದ್ದೆನೋ ಎಂಬಂತೆ ಬಾಲ್ಕನಿಯ ಕಡೆ ತೆರಳಿದರು. ಕಣ್ಣೆದುರು ನಡೆದದ್ದನ್ನು ಅರಗಿಸಿಕೊಳ್ಳಗಾಗದ ನಾನು ಕಾಣದ ದೇವರನ್ನು ನೆನಪಿಸುತ್ತಾ ಬಾಲ್ಕನಿಯ ಕಡೆಗೆ ಓಡಿದೆ. ಹುಚ್ಚಿಯಂತೆ ಚೀರಾಡುತ್ತಾ ಪೋಲೀಸ್ ಅಧಿಕಾರಿಗಳನ್ನು ಪಕ್ಕಕ್ಕೆ ಸರಿಸಿ ಬಾಲ್ಕನಿಯಿಂದ ಕೆಳಗೆ ಇಣುಕಿ ನೋಡಿದೆ.
ನಾಲ್ಕನೇ ಮಹಡಿಯಿಂದ ಉರುಳಿದ ಕಬೀರ್ ನ ದೇಹವು ರಸ್ತೆಯ ಮೇಲೆ ಅನಾಥವಾಗಿ ಬಿದ್ದಿತ್ತು. ಅವನ ತಲೆಯು ರಕ್ತದ ಮಡುವಿನಲ್ಲಿ ತೊಯ್ದುಹೋಗಿತ್ತು. ಇನ್ನೂ ಒಸರುತ್ತಿದ್ದ ರಕ್ತವು ಮೆಲ್ಲನೆ ದಾರಿಮಾಡಿಕೊಂಡು ಹೋಗುತ್ತಿರುವಂತೆ ಆಸುಪಾಸಿನ ಜಾಗವನ್ನು ಕೆಂಪು ಮಾಡತೊಡಗಿತ್ತು. ಮಹಿಪಾಲಪುರದ ಜನದಟ್ಟಣೆಯ ಹೆದ್ದಾರಿ ಕಬೀರನ ದೇಹದ ಸುತ್ತ ನೆರೆಯತೊಡಗಿದ ಜನಸಂದಣಿಯಿಂದಾಗಿ ಮತ್ತಷ್ಟು ನರಳಿತು.
ನಾನು ನಿಂತಲ್ಲೇ ಕುಸಿದು ಹೋದೆ.
ಮುಂದಿನ ಕೆಲವು ಘಂಟೆಗಳ ಕಾಲ ನಮ್ಮನ್ನೆಲ್ಲಾ ಜೈಲಿಗೆ ತಳ್ಳುವ ನಾಟಕ ಎಂದಿನಂತೆ ಮುಂದುವರೆಯಿತು. ನನ್ನ ಹೃದಯವಂತೂ ರಣದುಂದುಭಿಯಂತೆ ಬಡಿದುಕೊಳ್ಳುತ್ತಾ ಎದೆಸೀಳಿ ಹೊರಬರುತ್ತದೆಯೇನೋ ಅನ್ನುವಂತಿತ್ತು. ಕಬೀರ್ ನ ದೇಹದಲ್ಲಿ ಇನ್ನೂ ಪ್ರಾಣವಿತ್ತೇ, ಅವನಿಗೇನಾದರೂ ತಕ್ಷಣದ ಸಹಾಯ ದೊರೆತಿರಬಹುದೇ ಎಂಬೆಲ್ಲಾ ಪ್ರಶ್ನೆಗಳು ನಮ್ಮನ್ನು ಮುತ್ತಿಕ್ಕುತ್ತಿದ್ದವು. ಈ ಘಟನೆಯಿಂದ ಕೊಂಚ ವಿಚಲಿತರಾದಂತೆ ಕಂಡ ಆ ಪೋಲೀಸ್ ಅಧಿಕಾರಿ ಮತ್ತು ಅವನ ಇಬ್ಬರು ಹಿಂಬಾಲಕರು ಶಥಪಥ ತಿರುತ್ತಿರುವುದೂ ನನಗೆ ಕಾಣುತ್ತಿತ್ತು. ನನಗೆ ಗೊತ್ತಿದ್ದ ಮಟ್ಟಿಗೆ ಹಿಂದೆಂದೂ ರೇಡ್ ಆದ ಸಮಯದಲ್ಲಿ ಸಾವುನೋವುಗಳು ಆಗಿರಲಿಲ್ಲ. ನಾನು ಸಂಪೂರ್ಣವಾಗಿ ಅಧೀರಳಾಗಿದ್ದೆ. ಮೂಲೆಯೊಂದರಲ್ಲಿ ನಿಂತು ನನ್ನನ್ನೇ ಗಮನಿಸುತ್ತಿದ್ದ ಥಾಯ್ಲೆಂಡಿನ ನನ್ನ ಸಹೋದ್ಯೋಗಿ ಹೆಣ್ಣುಮಗಳು ಬಂದು ನನ್ನನ್ನು ಬಿಗಿಯಾಗಿ ಆಲಂಗಿಸಿಕೊಂಡಳು. ನನ್ನ ಕಣ್ಣೀರಿನ ಹನಿಗಳು ನನ್ನ ಕೆನ್ನೆಯನ್ನೂ, ಅವಳ ಗುಲಾಬಿ ಬಣ್ಣದ ಸಮವಸ್ತ್ರವನ್ನೂ ತೋಯಿಸಿದವು.
ಸಂಜೆ ಏಳರ ಹೊತ್ತಿಗೆ ಠಾಣೆಗೆ ಬಂದ ನಮ್ಮ ಸ್ಪಾ ದ ಮಾಲೀಕ ಪೋಲೀಸರ ಜೊತೆ ಏನೋ ಗುಸುಗುಸು ಮಾತನಾಡಿ ನಮ್ಮನ್ನು ಕರೆದುಕೊಂಡು ಹೋದ. ಠಾಣೆಯ ಹೊರಭಾಗದಲ್ಲಿ ನಿಂತಿದ್ದ ಇನ್ನೋವಾ ವ್ಯಾನೊಂದರಲ್ಲಿ ನಾವೆಲ್ಲರೂ ಸುರಕ್ಷಿತವಾಗಿ ಮರಳಿ ಮಹಿಪಾಲಪುರದ ನಮ್ಮ ಆಫೀಸ್ ಸಂಕೀರ್ಣಕ್ಕೆ ಬಂದಿಳಿದೆವು. ಕಬೀರ್ ಬಿದ್ದ ಜಾಗದಲ್ಲಿ ಜನದಟ್ಟಣೆಯು ಖಾಲಿಯಾಗಿ ಮಹಾನಗರಿಯು ಎಂದಿನಂತೆ ತನ್ನ ವೇಗದ ಬದುಕನ್ನು ಮುಂದುವರೆಸಿತ್ತು. ವಾಹನಗಳು ಒಂದರ ಹಿಂದೊಂದರಂತೆ ಟ್ರಾಫಿಕ್ಕನ್ನು ಸೀಳುತ್ತಾ, ಕರ್ಕಶ ಶಬ್ದಗಳೊಂದಿಗೆ ಹೊಗೆಯುಗುಳುತ್ತಾ ನಿರಂತರವಾಗಿ ವಾಯುವೇಗದಲ್ಲಿ ಓಡಾಡುತ್ತಿದ್ದವು. ರಸ್ತೆಯ ಮೇಲೆ ಒಣಗುತ್ತಿದ್ದ ಕಬೀರನ ರಕ್ತದ ಕಲೆಗಳು ನನ್ನನ್ನು ಅಣಕಿಸುತ್ತಿರುವಂತೆ ನನಗೆ ಭಾಸವಾಯಿತು. ಅದನ್ನು ನೋಡಲಾಗದ ನಾನು ಓಡೋಡುತ್ತಾ ಲಿಫ್ಟ್ ನ ಬಟನ್ ಒತ್ತಿ ನನ್ನ ಕೊಠಡಿಯನ್ನು ಸೇರಿಕೊಂಡು, ಬಾಗಿಲು ಮುಚ್ಚಿ ಬಿಕ್ಕತೊಡಗಿದೆ. ಕಬೀರ್ ನ ಬ್ಯಾಗು ಸೋಫಾದ ಬದಿಯಲ್ಲಿಟ್ಟಿದ್ದ ಸ್ಟೂಲ್ ಒಂದರ ಮೇಲೆ ಇನ್ನೂ ವಿರಾಜಮಾನವಾಗಿತ್ತು. ಪಕ್ಕದಲ್ಲಿದ್ದ ಹೂದಾನಿಯ ಹೂಗಳಲ್ಲಿ ಆ ದಿನ ನನಗೆ ಯಾವ ಜೀವಸೆಲೆಯೂ ಕಾಣಲಿಲ್ಲ.
ಪೋಲೀಸರ ದಾಂಧಲೆಯಿಂದ ಅಸ್ತವ್ಯಸ್ತವಾಗಿದ್ದ ಸ್ಪಾ ದ ಕೋಣೆಗಳನ್ನು ಯಥಾಸ್ಥಿತಿಗೆ ತರುವಷ್ಟರಲ್ಲಿ ರಾತ್ರಿ ಹತ್ತರ ಮೇಲಾಗಿತ್ತು. ಮಾಲೀಕನ ಡ್ರೈವರ್ ಬಂದು “ಇವತ್ತಿಗೆ ಸಾಕು ಅಂತ ಸಾಹೇಬ್ರು ಹೇಳಿದ್ರು. ಬನ್ನಿ, ಎಲ್ಲರನ್ನೂ ನಮ್ಮ ಫ್ಲ್ಯಾಟ್ ಗೆ ಡ್ರಾಪ್ ಮಾಡುತ್ತೇನೆ” ಎಂದು ಹೇಳಿ ಹೊರಟುಹೋದ. ದೀಪಗಳನ್ನು ಆರಿಸಿ, ಎಲ್ಲಾ ಕೋಣೆಗಳಿಗೆ ಬೀಗ ಜಡಿದು ಹೊರಟು ನಿಂತಾಗ ಮ್ಯಾನೇಜರ್ ತಾನ್ಯಾ ಬಳಿ ಹೋಗಿ “ಕಬೀರ್ ಏನಾದ?” ಅಂತ ಸಂಕೋಚದಿಂದಲೇ ಕೇಳಿದೆ. “ಹಿ ಈಸ್ ಡೆಡ್ ಮೈ ಡಿಯರ್. ಪೂರ್ ಫೆಲೊ”, ಎಂದು ತಾನ್ಯಾ ನಿಟ್ಟುಸಿರಿಟ್ಟಳು. ನಾನು ನನ್ನ ಎಡ ಕಂಕುಳಿನಲ್ಲಿ ಪವಡಿಸಿದ್ದ ಕಬೀರನ ಬ್ಯಾಗನ್ನು ಎದೆಗವಚಿಕೊಂಡು ಮೌನವಾಗಿ ಕಣ್ಣೀರಾದೆ.
ಆ ರಾತ್ರಿ ಹೆಣ್ಣುಮಕ್ಕಳೆಲ್ಲಾ ಊಟ ಮಾಡಿ, ಸುಸ್ತಾಗಿದ್ದ ಪರಿಣಾಮ ಬೇಗಬೇಗನೆ ಹಾಸಿಗೆ ಸೇರಿಕೊಂಡರು. ನನ್ನ ಹಸಿವೆಯೂ, ನಿದ್ರೆಯೂ ಸತ್ತುಹೋಗಿತ್ತು. ಶೆಲ್ಫ್ ಬಳಿ ಇಟ್ಟಿದ್ದ ಕಬೀರನ ಬ್ಯಾಗಿನೆಡೆಗೆ ತಿರುಗಿ ಕಬೀರನೇ ಕುಳಿತಿದ್ದಾನೆಯೋ ಎಂಬಂತೆ ನಾನು ನನ್ನ ಕೈಗಳಿಂದ ಬ್ಯಾಗನ್ನು ಸವರಿ ನಿಟ್ಟುಸಿರಾದೆ. ಕೋಣೆಯ ದೀಪವನ್ನಾರಿಸಿ ಬೆಡ್ ಲ್ಯಾಂಪ್ ಒಂದನ್ನೇ ಬೆಳಗಿಸಿ ಕಬೀರನ ಬ್ಯಾಗನ್ನು ತೊಡೆಯ ಮೇಲಿಟ್ಟು ನಾನು ಮೆಲ್ಲನೆ ತೆರೆಯತೊಡಗಿದೆ.
ಅಂಥದ್ದೇನೂ ಆ ಬ್ಯಾಗಿನಲ್ಲಿರಲಿಲ್ಲ. ಮಡಚಿಟ್ಟ ಒಂದು ಆಂಗ್ಲ ದಿನಪತ್ರಿಕೆಯೂ, ಬಹುಶಃ ಕೆಲವು ಅವನ ಆಫೀಸ್ ಸಂಬಂಧಿ ಪೇಪರ್ ಗಳೂ, ಪೆನ್ನುಗಳೂ, ಸೆಲ್ ಫೋನಿನ ಒಂದು ಚಾರ್ಜರ್, ಕವಿ ರೂಮಿಯ ಮುಖಪುಟವುಳ್ಳ ಒಂದು ಪುಸ್ತಕವೂ, ಒಂದು ಡೈರಿಯೂ ಅದರೊಳಗಿತ್ತು. ಉಳಿದೆಲ್ಲವನ್ನು ಬದಿಯಲ್ಲಿಟ್ಟು ದಪ್ಪನೆಯ ಕಂದು ಮೇಲ್ಹೊದಿಕೆಯುಳ್ಳ ಡೈರಿಯನ್ನು ಕೈಗೆತ್ತಿಕೊಂಡೆ. ಪುಟಗಳನ್ನು ಒಂದೊಂದಾಗಿ ತಿರುವುತ್ತಾ ಹೋದಂತೆ ಅದು ಕಬೀರ್ ತನ್ನ ಮುದ್ದಾದ ಕೈಬರಹದಲ್ಲಿ ಬರೆಯುತ್ತಿದ್ದ ದೈನಿಕ ಪರ್ಸನಲ್ ಡೈರಿ ಎಂಬುದು ನನಗೆ ಮನದಟ್ಟಾಯಿತು. ಆ ಪುಟಗಳಲ್ಲಿ ಅವನ ನೋವಿತ್ತು, ಹತಾಶೆಗಳಿದ್ದವು, ಅಸಹಾಯಕತೆಗಳಿದ್ದವು, ಅಲ್ಲಲ್ಲಿ ಇಣುಕುವ ಕವಿತೆಗಳೂ ಇದ್ದವು. ನಾನು ಡೈರಿಯ ಆ ದಿನಾಂಕದ ಪುಟಕ್ಕೆ ತೆರಳಿ ಸುಮ್ಮನೆ ಕಣ್ಣಾಡಿಸಿದೆ.
“ನನ್ನ ಏಕಾಂಗಿ ಜೀವನದ ಕುಸಿದುಹೋದ ದನಿಗಳಿಗೆ ಕಿವಿಯಾದ ಒಂದೇ ಒಂದು ಜೀವವೆಂದರೆ ಆಯಿಷಾ. ಹಲವು ವರ್ಷಗಳ ನಂತರ ಅಪರೂಪದ ಬೆಳಕೊಂದು ಈ ಅಂಧಕಾರದ ನಡುವಿನಲ್ಲಿ ನನಗೆ ಕಾಣಿಸಿದೆ. ಇವತ್ತೂ ಅವಳನ್ನು ನೋಡಲು ಹೋಗುತ್ತಿದ್ದೇನೆ. ಐ ಆಮ್ ಎಕ್ಸೈಟೆಡ್”, ಎಂದು ಅದರಲ್ಲಿ ಬರೆದಿತ್ತು. ಶಾಯಿಪೆನ್ನಿನಲ್ಲಿ ಮುದ್ದಾಗಿ ಬರೆದಿಟ್ಟಿದ್ದ ಆ ಸಾಲುಗಳನ್ನು ನೋಡಿ ನನ್ನ ಕಣ್ಣುಗಳು ತೇವವಾದವು. ಶುದ್ಧವಾಗಿದ್ದ ಆ ಬಿಳಿಪುಟವು ಇನ್ನೂ ಖಾಲಿಯಿತ್ತು. ಬರೆದಿಡಲು ಇನ್ನೂ ಸಾಕಷ್ಟು ಖಾಲಿ ಗೆರೆಗಳಿದ್ದವು. ಆದರೆ ಲೇಖಕ, ಸಹೃದಯಿ, ಏಕಾಂಗಿ ಕಬೀರ್ ತನ್ನ ಕಥೆಗೊಂದು ತಾಕರ್ಿಕ ಅಂತ್ಯವನ್ನೂ ಕಾಣಿಸದೆ ಇಹಲೋಕವನ್ನೇ ತ್ಯಜಿಸಿದ್ದ.
ಸಾವಿನ ಬಗ್ಗೆ ಒಂದು ಆಕರ್ಷಣೆ ಕಬೀರನಿಗೆ ಇತ್ತಾದರೂ ಅದು ತನ್ನ ನೋವನ್ನು ಒಂದೇ ಏಟಿಗೆ ಹೊಡೆದೋಡಿಸಲು ಉಳಿದ ಏಕೈಕ ಮಾರ್ಗ ಎಂಬ ಒಂದೇ ಕಾರಣದಿಂದಷ್ಟೇ. ಅವನಿಗೂ ಬಾಳಬೇಕೆಂಬ ಆಕಾಂಕ್ಷೆಯಿತ್ತು. ಆದರೆ ಸದ್ದಿಲ್ಲದೆ ಕ್ಷಣಕ್ಷಣವೂ ಅವನನ್ನು ಕೊಲ್ಲುತ್ತಿರುವ ಏಕಾಂಗಿತನ, ಖಿನ್ನತೆಗಳು ಅವನನ್ನು ಹೈರಾಣಾಗಿಸಿದ್ದವು. ಅವನ ದುಃಖಗಳಿಗೆ, ಕಣ್ಣೀರಿಗೆ, ಮೌನಕ್ಕೆ ಆಧಾರವಾಗಬಲ್ಲ ಸಂಗಾತಿಯಷ್ಟೇ ಬೇಕಿದ್ದುದು ಅವನಿಗೆ. “ಪ್ರತೀ ಕ್ಷಣವೂ ಸಾಯುವುದಕ್ಕಿಂತ ಒಮ್ಮೆಲೇ ಸಾಯುವುದು ಒಳ್ಳೆಯದು ಅಂತನಿಸುತ್ತದೆ” ಎಂದು ಅವನು ಹೇಳಿದ ನೆನಪು. ಕ್ಷೀಣವಾಗಿದ್ದ ಜೀವನಪ್ರೀತಿಯನ್ನು ಉಳಿಸಿಕೊಳ್ಳಲು ಪದೇ ಪದೇ ನನ್ನ ಬಳಿ ಕಬೀರ್ ಬರುತ್ತಿದ್ದ. ಬಹುಶಃ ನಾನು ಅವನ ಏಕೈಕ ಭರವಸೆಯ ಕಿರಣವಾಗಿದ್ದೆ. ಹಿಸ್ ಓನ್ಲೀ ಹೋಪ್.
ಹೇಳಲು ಇನ್ನೇನೂ ಉಳಿದಿಲ್ಲ. ಕಬೀರ್ ಸಿಹಿನೆನಪುಗಳನ್ನು ನನ್ನಲ್ಲಿ ಬಿಟ್ಟುಹೋಗಿದ್ದ. ನನ್ನ ಹೃದಯ ಭಾರವಾಗಿತ್ತು. ನಾನು ಮತ್ತೊಮ್ಮೆ ಏಕಾಂಗಿಯಾಗಿದ್ದೆ.